ಸಕಲೇಶಪುರ: ಕಾಫಿ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರು ಬೆಳೆಗಾರರ ಜೊತೆ ಕೈಜೋಡಿಸಬೇಕಾಗಿದೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಹೇಳಿದರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಆನ್ಲೈನ್ ಮುಖಾಂತರ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಕೋರ್ ಕಮಿಟಿ ಸಮಿತಿ ಸಭೆ ಆಯೋಜನೆ ಆಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದೇನೆ. ಈ ನಿಟ್ಟಿನಲ್ಲಿ ನಿಮ್ಮೆನ್ನೆಲ್ಲ ಉದ್ದೇಶಿಸಿ ಆನ್ಲೈನ್ನಲ್ಲಿ ಮಾತನಾಡುತ್ತಿರುವುದು ಸಂತೋಷ ತಂದಿದೆ. ಕಾಫಿ ಬೆಳೆ ಮಾರಾಟಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಅವಲಂಬಿಸಿರುವುದರಿಂದ ಬೆಳೆಗಾರರಿಗೆ ಹಲವು ತೊಂದರೆಗಳು ಉಂಟಾಗುತ್ತಿದೆ.
ಕಾಫಿ ಸಂಸ್ಕೃತಿ ಉಳಿಸಿ - ಬೆಳೆಸಲು ನಾವೆಲ್ಲರು ಬೆಳೆಗಾರರ ಜೊತೆ ಕೈಜೋಡಿಸಬೇಕು: ಸಚಿವ ಸಿ.ಟಿ ರವಿ ಈ ಹಿನ್ನೆಲೆಯಲ್ಲಿ ದೇಶಿಯವಾಗಿ ಕಾಫಿ ಬಳಕೆ ಹೆಚ್ಚಿಸಬೇಕಾಗಿದೆ. ಒಂದು ಕಾಲದಲ್ಲಿ ಕಾಫಿ ಬೆಳೆಗಾರ ಎಂದರೆ ಶ್ರೀಮಂತ ಎಂಬ ಮಾತಿತ್ತು. ಇಂದು ಅದು ಬದಲಾಗಿದೆ. ಹಲವಾರು ಕಾರಣಗಳಿಂದ ಇಂದು ಕಾಫಿ ಉದ್ಯಮ ಸಂಕಷ್ಟದಲ್ಲಿದ್ದು, ಈ ಹಿನ್ನೆಲೆಯಲ್ಲಿ ಉದ್ಯಮವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬೆಳೆಗಾರರ ಸಂಕಷ್ಟಗಳನ್ನು ನಾನು ಒಬ್ಬ ಬೆಳೆಗಾರನಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತೇನೆ ಎಂದರು.
ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಮಲೆನಾಡಿನಲ್ಲಿ ಇಂದು ಸಹ ಮನೆಗಳಿಗೆ ಅತಿಥಿಗಳು ಬಂದಾಗ ಟೀ ಕೊಡಲು ಮುಂದಾಗುತ್ತಾರೆ. ನಾವು ಮೊದಲ ಮನೆಗೆ ಬರುವ ಅತಿಥಿಗಳಿಗೆ ಕಾಫಿ ಕೊಡಲು ಮುಂದಾಗಬೇಕು. ಇದರಿಂದ ಕಾಫಿಯ ಬಳಕೆ ಹೆಚ್ಚಾಗುತ್ತದೆ. ಅತಿವೃಷ್ಟಿಯಿಂದ ಹಲವು ಬೆಳೆಗಾರರು ತತ್ತರಿಸಿದ್ದು, ಜೊತೆಗೆ ಕಾಡಾನೆಗಳ ಹಾವಳಿ ಬೆಳೆಗಾರರನ್ನು ಮತ್ತಷ್ಟು ಸಂಕಟಕ್ಕೆ ತಳ್ಳಿದೆ. ಈ ಹಿಂದೆ ಸುಮಾರು 22 ಕಾಡಾನೆಗಳನ್ನು ಸ್ಥಳಾಂತರ ಮಾಡಲಾಗಿದ್ದು, ಇದೀಗ ಸುಮಾರು 60ರಿಂದ 70 ಕಾಡಾನೆಗಳ ಈ ಭಾಗದಲ್ಲಿದ್ದು, ಇದನ್ನು ಸ್ಥಳಾಂತರ ಮಾಡಲು ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ. ಕಾಫಿ ಮಂಡಳಿ ಅಧ್ಯಕ್ಷರಿಗೆ ಅಧಿಕಾರ ಕಡಿಮೆಯಿದ್ದು ,ಇದರಿಂದ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಇವರಿಗೆ ಹೆಚ್ಚಿನ ಅಧಿಕಾರವನ್ನು ಕೇಂದ್ರ ಸರ್ಕಾರ ನೀಡಬೇಕೆಂದು ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ತೀರ್ಮಾನ ಮಾಡಿದ್ದರೂ ನೂರಾರು ಮಂದಿ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದವರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಕಾಫಿ ತಯಾರಿಸುವ ವಿವಿಧ ಜಿಲ್ಲೆಗಳ ಹೋಟೆಲ್ ಗಳಿಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಬೆಳೆಗಾರರು ಸಾಮೂಹಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬೆಳೆಗಾರರ ಅನುಕೂಲಕ್ಕಾಗಿ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು. ಕಾಫಿ ಸಂಸ್ಕೃತಿ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾಫಿ ಬೆಳೆಗಾರ ಸುಬ್ಬೇಗೌಡರಿಗೆ ಅವರ ಅನುಪಸ್ಥಿತಿಯಲ್ಲಿ ಕಾಫಿ ರತ್ನ ಪ್ರಶಸ್ತಿ ನೀಡಲಾಯಿತು.