ಹಾಸನ: ಬಿಸಿಯೂಟ ನೌಕರರಿಗೆ ಕಳೆದ 4 ತಿಂಗಳ ಬಾಕಿ ವೇತನ ಕೂಡಲೆ ಬಿಡುಗಡೆ ಮಾಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಿ, ಜಿ.ಪಂ ಸಿಇಒ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
4 ತಿಂಗಳಿಂದ ವೇತನ ವಿಳಂಬ: ಬಿಸಿಯೂಟದ ನೌಕರರ ಉಪವಾಸ ಸತ್ಯಾಗ್ರಹ
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಾಸನದಲ್ಲಿ ಬಿಸಿಯೂಟ ನೌಕರರ ಸಂಘದಿಂದ ಸಿಐಟಿಯು ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿ 117999 ನೌಕರರು 19 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರೆಲ್ಲ ಬಡತನ ಹಿನ್ನೆಲೆ ಮಹಿಳೆಯರು, ವಿಚ್ಛೇದಿತರು, ವಿಧವೆಯರು ಆಗಿದ್ದು, ಇವರು ಈ ಉದ್ಯೋಗದಿಂದಲೇ ಜೀವನೋಪಾಯ ಕಂಡುಕೊಂಡಿದ್ದಾರೆ. ಇವರಿಗೆ 4 ತಿಂಗಳಿನಿಂದ ಯಾವುದೇ ಆದಾಯವಿಲ್ಲದೆ ಅತ್ಯಂತ ನಿಕೃಷ್ಟ ಪರಿಸ್ಥಿತಿಗೆ ಬಂದಿದ್ದಾರೆ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ 3 ಬಾರಿ ಮನವಿ ಸಲ್ಲಿಸಲಾಗಿದೆ. ವೇತನ ಹಾಗೂ ಇನ್ನಿತರ ಬೇಡಿಕೆಗಳಿಗಾಗಿ ಅನೇಕ ಬಾರಿ ಸರ್ಕಾರದ ಗಮನ ಸೆಳೆಯಲಾಗಿದೆ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ವೇತನ ನೀಡಲು ಶಿಫಾರಸು ಮಾಡಿದ್ದರೂ ಕೂಡಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಎಲ್ಲಾ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮುಂದೆ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ತೀರ್ಮಾನಿಸಿದೆ. ಕೂಡಲೇ ಸರ್ಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.