ಹಾಸನ:ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಒಂದು ನೆನಪು ಕಾರ್ಯಕ್ರಮ ನಡೆಸಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಾಹಾನೀಯರಿಗೆ ಪುಷ್ಪಾರ್ಚನೆ ಮಾಡಲಾಯಿತು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಘು ಮಾತನಾಡಿ, ಭಾರತ ಬಿಟ್ಟು ತೊಲಗಿ ಚಳುವಳಿಯು ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ನಡೆಯಿತು. ಇದರ ಗುರಿ ಬ್ರಿಟಿಷ್ ಸರ್ಕಾರದಿಂದ ಭಾರತದ ಸ್ವಾತಂತ್ರ್ಯ ಪಡೆಯುವುದಾಗಿತ್ತು. 1942 ಆಗಸ್ಟ್, 8ರಂದು ಮುಂಬೈಯ ಗೊವಾಳಿಯ ಮೈದಾನದಲ್ಲಿ ಗಾಂಧೀಜಿಯವರು ಮಾಡು ಇಲ್ಲವೆ ಮಡಿ ಘೋಷಣೆಯೊಂದಿಗೆ ಈ ಚಳವಳಿ ನಡೆಸುವುದಾಗಿ ಪ್ರಕಟಿಸಿದರು. ಆಗಸ್ಟ್. 9ರಿಂದ ಚಳವಳಿ ಆರಂಭವಾಯಿತು. ಕೊನೆಗೆ ಬ್ರಿಟಿಷರು ಗಾಂಧೀಜಿಯವರನ್ನು ಬಂಧಿಸಿ ಅಗಾಖಾನ್ ಅರಮನೆಯಲ್ಲಿ ಗೃಹ ಬಂಧನದಲ್ಲಿಟ್ಟರು ಎಂದರು.
ಕ್ವಿಟ್ ಇಂಡಿಯಾ ಚಳವಳಿಯ ಒಂದು ನೆನಪು ಕಾರ್ಯಕ್ರಮ ಗಾಂಧೀಜಿ ಬಂಧನಕ್ಕೊಳಗಾದ ನಂತರ ಜೆ.ಪಿ. ನಾರಾಯಣ್, ಲೋಹಿಯಾ, ಅರುಣಾ ಆಸಿಫ್ ಅಲಿ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಚಳವಳಿಯ ತೀಕ್ಷಣತೆಯನ್ನು ಅರಿತ ಬ್ರಿಟಿಷರು, ಬಹುತೇಕ ಪ್ರಮುಖ ನಾಯಕರನ್ನು ಸೆರೆಮನೆಗೆ ಹಾಕಿದರು. ನಾಯಕರಿಲ್ಲದೆಯೇ ಚಳವಳಿ ಉಗ್ರ ಸ್ವರೂಪವನ್ನು ಕಂಡಿದ್ದು, ಈ ಚಳವಳಿಯ ಹೆಗ್ಗಳಿಕೆ. ಇಡೀ ದೇಶದಲ್ಲಿ ಕ್ರಾಂತಿಯ ಅಲೆ ಎದ್ದಿತು. ದೇಶದ ಮೂಲೆ ಮೂಲೆಯಲ್ಲೂ ಈ ಘೋಷಣೆಯು ಜನರನ್ನು ಬಡಿದೆಬ್ಬಿಸಿತು. ಕೃಷಿಕರು ಬಹು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಈ ಚಳವಳಿಯ ಬಹು ಮುಖ್ಯ ಅಂಶವಾಗಿತ್ತು ಎಂದರು.
ಬ್ರಿಟಿಷರ ದಬ್ಬಾಳಿಕೆಯು ದೇಶದ ಜನರ ಕಣಕಣದಲ್ಲೂ ರಕ್ತ ಕುದಿಯುವಂತೆ ಮಾಡಿತ್ತು. ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆಗಳು ಬ್ರಿಟಿಷ್ ಆಡಳಿತದ ಬುಡ ಹತ್ತಿ ಉರಿಯಲಾರಂಭಿಸಿತು. ಅದರ ಕಾವಿನ ಪರಿಣಾಮವೇ ಐದು ವರ್ಷದ ಬಳಿಕ ನಾವು 1947ರ ಆಗಸ್ಟ್ 15ರಂದು ಗಳಿಸಿದ ಸ್ವಾತಂತ್ರ್ಯವಾಗಿದೆ ಎಂದರು.