ಹಾಸನ :ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರ ಮನೆಗಳಿಗೆ ಎರಡನೇ ಹಂತದ ಹಣ ಬಿಡುಗಡೆ ಮಾಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿರಿ ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಹೇಳಿದ್ದಾರೆ
ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ, ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ, ಮೂಲಭೂತ ಸೌಕರ್ಯಗಳ ದುರಸ್ಥಿ ಮತ್ತು ಪುನರ್ ನಿರ್ಮಾಣ ಪ್ರಗತಿ ಕುರಿತ ವರದಿ ಪಡೆದರಲ್ಲದೆ, ಪ್ರವಾಹದಿಂದ ಉಂಟಾದ ಬೆಳೆ ಹಾನಿಗೆ ಇನ್‍ಪುಟ್ ಸಬ್ಸಿಡಿ ವಿತರಿಸುವ ಬಗ್ಗೆ ಮತ್ತು 2020-21 ನೇ ಸಾಲಿನಲ್ಲಿ ನಡೆಯಲಿರುವ ಜನಗಣತಿ ಕುರಿತಂತೆ ಪೂರ್ವಭಾವಿ ತಯಾರಿಯ ಕುರಿತಾಗಿ ಅವರು ಸಲಹೆ ಸೂಚನೆಗಳನ್ನು ನೀಡಿದರು.
ಸಂತ್ರಸ್ತರ ಜಿಲ್ಲೆಯಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಜಿ.ಪಿ.ಎಸ್ ಮಾಡಿ ಎರಡನೇ ಹಂತದ ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಮುಂದುವರೆಸುವಂತೆ ಹೇಳಿದರು. ಮೂಲಭೂತ ಸೌಕರ್ಯಗಳ ಪುನರ್ ನಿರ್ಮಾಣಕ್ಕಾಗಿ ಹಣ ಬಿಡುಗಡೆಯಾಗಿದ್ದು, ಸಣ್ಣ ನೀರಾವರಿ, ಪಿ.ಆರ್.ಇ.ಡಿ., ಪಿ.ಡ್ಲ್ಯೂ.ಡಿ., ಗ್ರಾಮೀಣ ರಸ್ತೆ ದುರಸ್ಥಿ ಕಾರ್ಯಗಳಿಗೆ ಸಂಪೂರ್ಣವಾಗಿ ಹಣ ಬಳಕೆ ಮಾಡಿಕೊಂಡು ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಪ್ರವಾಹದಿಂದ ಹಾನಿಗೊಳಗಾದ ರೈತರ ಬೆಳೆಗೆ ಸರ್ಕಾರದಿಂದ ಇನ್‍ಪುಟ್ ಸಬ್ಸಿಡಿಯನ್ನು ಹಂತಹಂತವಾಗಿ ವಿತರಿಸಲಾಗುವುದು ಎಂದರಲ್ಲದೆ, ಶಾಲೆ ಮತ್ತು ಅಂಗನವಾಡಿಗಳ ದುರಸ್ತಿ ಕಾರ್ಯವನ್ನು ಶೀಘ್ರವಾಗಿ ಮುಗಿಸುವಂತೆ ಅವರು ಜಿಲ್ಲಾಧಿಕಾರಿಗಳಿಗೆ ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿಯವರು ಸೂಚನೆ ನೀಡಿದ್ದಾರೆ.