ಹಾಸನ: ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿ ಬಳಕೆ ಕುರಿತು ಸಮರ್ಪಕ ಮಾಹಿತಿ ನೀಡದ ಹೆಚ್ಪಿಸಿಎಲ್ ಕಂಪನಿ ಅಧಿಕಾರಿಗಳನ್ನು ಶಾಸಕ ಪ್ರೀತಂಗೌಡ ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕೈಗಾರಿಕಾ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಕಂಪನಿ ವಜಾಗೊಳಿಸಿ, ಪ್ರಕರಣ ದಾಖಲಿಸುತ್ತೇನೆ. ಶಾಲಾ- ಕಾಲೇಜುಗಳಿಗೆ ಬೆಂಚು ಹಾಗೂ ಕಂಪ್ಯೂಟರ್ ವಿತರಿಸುವಂತೆ 5 ಬಾರಿ ಹೇಳಿದ್ದೇನೆ. ಈ ಮಾತನ್ನು ಕೇಳದೆ ಗವೇನಹಳ್ಳಿ ಹಾಗೂ ಜವೇನಹಳ್ಳಿ ಕೆರೆಯಲ್ಲಿ 35 ಲಕ್ಷದಲ್ಲಿ ಟ್ಯಾಂಕ್ಗಳನ್ನು ನಿರ್ಮಿಸಿರುವುದು ತಪ್ಪು ಎಂದು ಕಂಪನಿ ವಿರುದ್ಧ ಕಿಡಿಕಾರಿದರು.
ದುಡ್ಡು ಕೇಳಿದರೆ ಇಲ್ಲ ಎಂದು ಉತ್ತರಿಸುತ್ತಾರೆ. ಲೂಟಿ ಹೊಡೆಯಲು ದುಡ್ಡನ್ನೆಲ್ಲಾ ಕೆರೆಗೆ ಹಾಕುತ್ತೀರಾ? ಇಷ್ಟಕ್ಕೂ ಯಾರ ಅನುಮತಿ ಪಡೆದ್ದಿದ್ದೀರಾ? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳಿಗೆ ಶಾಸಕ ಪ್ರೀತಂಗೌಡ ತರಾಟೆ ಸಿಎಸ್ಆರ್ ನಿಧಿ ಖರ್ಚು ಮಾಡಲು ಬ್ಲಾಕ್ ಮೇಲ್ ಮಾಡುವುದಿಲ್ಲ. ಸ್ವಯಂ ಪ್ರೇರಣೆಯಿಂದ ಕೊಡುವುದಾದರೇ ಕೊಡುವ ಹಣದಲ್ಲಿ ನೀವು ಅರ್ಧ ಖರ್ಚು ಮಾಡಿ. ಉಳಿದದ್ದು ಜನಪ್ರತಿನಿಧಿಗಳು ತಿಳಿಸಿದ ಪ್ರಸ್ತಾವನೇ ಪ್ರಕಾರವೇ ಖರ್ಚು ಮಾಡಿ ಎಂದರು.
ಕೆಲವು ಕಡೆಗಳಲ್ಲಿ ಶಾಸಕರ ನಿಧಿಯಿಂದ ಹಣ ನೀಡಿರುತ್ತೇವೆ. ಈಗ ನೀವು ಕಂಪ್ಯೂಟರ್, ಬೆಂಚುಗಳನ್ನು ವಿತರಿಸಿ ಎರಡೆರಡು ಬಾರಿ ಹಣ ವ್ಯಯಿಸುವುದು ಬೇಡ. ಮುಂದೆ ಮಾಡುವ ಎಲ್ಲ ಸಿಎಸ್ಆರ್ ನಿಧಿ ಖರ್ಚು ಕುರಿತು ಜಿಲ್ಲಾಧಿಕಾರಿ ಹಾಗೂ ಎಲ್ಲಾ ಶಾಸಕರಿಗೆ ವಿವರವಾದ ವರದಿ ನೀಡಬೇಕು ಎಂದು ಸೂಚಿಸಿದರು.
ಒಂದೂವರೇ ವರ್ಷದಿಂದ ಸಿಎಸ್ಆರ್ ನಿಧಿ ಖರ್ಚು ಬಗ್ಗೆ ಕೇಳಿದರೂ ಹಣ ಇಲ್ಲ ಎಂದವರು ಈಗ ಮೂರು ತಿಂಗಳಲ್ಲಿ ಅನುಮೋದನೆ ಮಾಡಿದವರು ಯಾರು? ಬೇರೆಯವರ ಬಳಿ ಮಾತನಾಡಿದ ಹಾಗೇ ನನ್ನ ಬಳಿ ತಲೆ ಹರಟೆ ಮಾತನಾಡಬೇಡಿ. ಬೇರೆ ಕಂಪನಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ನಿಮ್ಮ ಕಂಪನಿ ಬಗ್ಗೆ ಏಕೆ ಮಾತನಾಡುತ್ತಿದ್ದೇನೆ ಎಂದು ಪ್ರಶ್ನಿಸಿದರು.