ಅರಕಲಗೂಡು:ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತೆಯಾಗಿ ಸರ್ಕಾರ ಶ್ರಮಿಸುತ್ತಿದೆ. ಅದರಂತೆ ಅರಕಲಗೂಡು ತಾಲೂಕಿನಲ್ಲಿ ನಾವು ಕೂಡ ಜನರ ರಕ್ಷಣೆಗಾಗಿ ಸಿದ್ದರಾಗಿದ್ದು, ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು. ಅರಕಲಗೂಡಿನ ತಾಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ಟಾಸ್ಕ್ಫೋರ್ಸ್ ಸಮಿತಿ ರಚಿಸಿದ್ದು, ತಾಲೂಕಿನಲ್ಲಿರುವ ಕಟ್ಟಡ ಕಾರ್ಮಿಕರು, ಅಲೆಮಾರಿಗಳು, ನಿರ್ಗತಿಕರು ಹಾಗೂ ಕಡು ಬಡವರನ್ನು ಗುರುತಿಸಿ ಆಹಾರ ಮತ್ತು ವಸತಿಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಜನರಿಗೆ ಈಗಾಗಲೇ ಎರಡು ತಿಂಗಳ ಪಡಿತರ ವಿತರಣೆ ಮಾಡಿದೆ. ಕೇಂದ್ರ ಸರ್ಕಾರ ಎರಡು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲು, ಪಡಿತರ ದಾಸ್ತಾನು ಮಾಡಲಾಗಿದೆ. ಸಮರ್ಪಕವಾಗಿ ಲೋಪವಿಲ್ಲದೆ ವಿತರಣೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.ರೈತರು ಬೆಳೆದಿರುವ ಬೆಳೆಯನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಕೊಳ್ಳುವವರ ಪಟ್ಟಿ ಮಾಡಲಾಗಿದ್ದು, ಅದರ ಮಾಹಿತಿ ರೈತರಿಗೆ ನೀಡಲು ಸಹಾಯವಾಣಿ(08175-221491)ಯನ್ನು ತೆರೆಯಲಾಗಿದೆ ಎಂದರು. ದಿನದ ಬೆಳಗ್ಗೆ 7ರಿಂದ ರಾತ್ರಿ 9 ರವರೆಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದ್ದು, ರೈತರು ಆತಂಕ ಪಡಬೇಕಾಗಿಲ್ಲ ಎಂದರು.