ಹಾಸನ:ಸರ್ಕಾರದ ಲಾಕ್‌ಡೌನ್ ಆದೇಶ ಪಾಲಿಸಿ ಎಂದು ಹೇಳಿದ ಪೇದೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ತಿರುಗಾಡಬೇಡ ಮನೆಗೆ ವಾಪಸ್ ಹೋಗು ಅಂದಿದ್ದಕ್ಕೆ ಪೇದೆ ಮೇಲೆ ಹಲ್ಲೆ: ಆರೋಪಿ ಅರೆಸ್ಟ್ - ಹಾಸನದಲ್ಲಿ ಲಾಕ್‌ಡೌನ್ ಉಲ್ಲಂಘನೆ
ಜನರಿಗೆ ಕೊರೊನಾ ಮಹಾಮಾರಿಯ ನಿಜವಾದ ಸ್ವರೂಪ ಗೊತ್ತಿಲ್ಲದಂತೆ ಕಾಣುತ್ತಿದೆ. ಸರ್ಕಾರದ ಲಾಕ್‌ಡೌನ್ ನಿಯಮ ಪಾಲಿಸಿ ಎಂದು ಹೇಳಿದ ಪೇದೆ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಪೆನ್ಷನ್ ಮೊಹಲ್ಲಾ ಬಡಾವಣೆ ನಿವಾಸಿ ಶಬ್ಬೀರ್ (40) ಬಂಧಿತ ಆರೋಪಿ. ಶುಕ್ರವಾರ ಮಧ್ಯಾಹ್ನದ ವೇಳೆ ವಲ್ಲಭಭಾಯ್ ರಸ್ತೆಯ ಮಟನ್ ಮಾರ್ಕೆಟ್ ವೃತ್ತದಲ್ಲಿ ಆಟೋ ಓಡಿಸಿಕೊಂಡು ಬಂದ ಶಬ್ಬೀರ್‌ನನ್ನು ತಡೆದ ಪೆನ್ಷನ್ ಮೊಹಲ್ಲಾ ಠಾಣೆಯ ಪೇದೆ, ಅನಗತ್ಯವಾಗಿ ಓಡಾಡಬಾರದು. ವಾಪಸ್ ಹೋಗು ಎಂದು ಹೇಳಿದ್ದಾರೆ. ಆದರೆ ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಟೋದಿಂದ ಕೆಳಗಿಳಿದ ಶಬ್ಬೀರ್ ಪೊಲೀಸ್ ಪೇದೆಯ ಕಪಾಳಕ್ಕೆ ಹೊಡೆದು ಕಿವಿಗೆ ಗುದ್ದಿದ್ದಾನೆ.
ನಂತರ ಪಕ್ಕದಲ್ಲಿದ್ದ ಕಲ್ಲು ಕೈಗೆತ್ತಿಕೊಂಡು ಎಸೆದಿದ್ದಾನೆ. ಪರಿಸ್ಥಿತಿಯ ಗಂಭೀರತೆ ಅರಿತ ಪೇದೆ ತಕ್ಷಣವೇ ಎಚ್ಚೆತ್ತು ಅಲ್ಲಿಂದ ಪರಾರಿಯಾಗಿದ್ದು, ಕಲ್ಲು ಮೈ ಮೇಲೆ ಬಿದ್ದಿಲ್ಲ. ಆದರೆ ಓಡುವಾಗ ಕಾಲು ಜಾರಿ ಬಿದ್ದು ಸ್ವಲ್ಪ ಏಟಾಗಿದೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಬ್ಬೀರ್‌ನನ್ನು ಬಂಧಿಸಲಾಗಿದೆ.