ಹಾಸನ:ಆಸ್ತಿ ಕಲಹ ಹಿನ್ನೆಲೆಯಲ್ಲಿ ಮಕ್ಕಳನ್ನು ಭೇಟಿಯಾಗಲು ಹೆಂಡತಿ ಅವಕಾಶ ನೀಡಲಿಲ್ಲ ಎಂದು ಕುಪಿತಗೊಂಡ ಪತಿ ಮನೆಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಜಿಲ್ಲೆಯ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಘಟನೆಯಲ್ಲಿ ಪತ್ನಿ ಗೀತಾ ಮತ್ತು ಮಕ್ಕಳಾದ ಚಿರಂತನ್ ಮತ್ತು ನಂದನ್ ಅವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಇವರೆಲ್ಲ ಮನೆಯಲ್ಲಿ ಮಲಗಿದ್ದಾಗ ಆರೋಪಿ ಗಂಡ ರಂಗಸ್ವಾಮಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಂಗಸ್ವಾಮಿ ಮತ್ತು ಗೀತಾ ದಂಪತಿ ನಡುವೆ ಮೊದಲಿನಿಂದಲೂ ಆಸ್ತಿ ಸಂಬಂಧ ಜಗಳವಾಗುತ್ತಿತ್ತು. ಈ ಬಗ್ಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು, ಪ್ರತಿದೂರು ದಾಖಲಿಸಿದ್ದರು. ಅಲ್ಲದೆ, ಕಳೆದ ನಾಲ್ಕು ತಿಂಗಳಿನಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಗೀತಾ ಇಬ್ಬರು ಮಕ್ಕಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.