ಹಾಸನ:ಕಟ್ಟಿಕೊಂಡ ಪತಿ ಮೃತಪಟ್ಟು 24 ಗಂಟೆ ಕಳೆದರೂ ಸಂಬಂಧಿಕರು ಬಾರದ ಹಿನ್ನೆಲೆಯಲ್ಲಿ ಶವದ ಮುಂದೆಯೇ ಪತ್ನಿ ದಿನಕಳೆದಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ನಗರದ ರಂಗೋಲಿ ಹಳ್ಳ ಬಡಾವಣೆಯಲ್ಲಿದ್ದ ಅಣ್ಣಪ್ಪ ಕಳೆದ ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಭಾನುವಾರ ಅಣ್ಣಪ್ಪ ಮೃತಪಟ್ಟಿದ್ದು, ಈ ವಿಚಾರವನ್ನು ಸ್ಥಳೀಯರು ಅವರ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮೃತಪಟ್ಟ ಕೆಲವು ಗಂಟೆಗಳಲ್ಲಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಿಂದ ಓರ್ವ ಸಂಬಂಧಿ ಮಾತ್ರ ಬಂದಿದ್ದು, ಆತ ಮೃತದೇಹದ ಅಂತಿಮ ದರ್ಶನ ಮಾಡಿ ತೆರಳಿದ್ದಾನೆ. ಉಳಿದಂತೆ ಬೇರೆ ಯಾವುದೇ ಸಂಬಂಧಿಕರೂ ಬಂದಿಲ್ಲ. ಹೀಗಾಗಿ ಕಂಗಾಲಾದ ಅಣ್ಣಪ್ಪನ ಪತ್ನಿ ಪಾರ್ವತಮ್ಮ ಗಂಡನ ಶವದ ಮುಂದೆ 24 ಗಂಟೆ ಕಳೆದಿದ್ದಾಳೆ.