ಹಾಸನ: ಮೂಲಭೂತ ಹಕ್ಕುಗಳಷ್ಟೇ ಮೂಲಭೂತ ಕರ್ತವ್ಯಗಳು ಕೂಡಾ ಅತಿ ಮುಖ್ಯವಾಗಿದ್ದು, ಅವುಗಳನ್ನು ಪ್ರತಿಯೊಬ್ಬ ಪ್ರಜೆಯೂ ಪಾಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಕೆ.ಬಸವರಾಜ್ ಹೇಳಿದ್ದಾರೆ.
ಸಿವಿಲ್ ನ್ಯಾಯಾಧೀಶ ಸಿ.ಕೆ. ಬಸವರಾಜ್ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ನಗರಾಭಿವೃದ್ಧಿ ಕೋಶದ ವತಿಯಿಂದ ಮೂಲಭೂತ ಕರ್ತವ್ಯಗಳ ಜಾಗೃತಿಗಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ, ಕಾರ್ಯಾಗಾರ ಹಾಗೂ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಜಗತ್ತಿನಲ್ಲೇ ಅತಿ ದೊಡ್ಡ ಸಂವಿಧಾನ ಹೊಂದಿದ್ದು, ಅದರಲ್ಲಿ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಮಾತನಾಡಿ, ತಾಲೂಕು ಮಟ್ಟದ ತಹಶೀಲ್ದಾರ್ ಕಚೇರಿ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ಏರ್ಪಡಿಸುವಂತೆ ಸೂಚಿಸಿದರು. ಗ್ರಾಮ ಪಂಚಾಯಿತಿ ಹಂತದಲ್ಲಿರುವ ಸಾರ್ವಜನಿಕರಿಗೆ ಮೂಲಭೂತ ಕರ್ತವ್ಯದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಂಡು ಅದರ ಬಗ್ಗೆ ವರದಿ ಹಾಗೂ ಛಾಯಾಚಿತ್ರಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಒದಗಿಸುವಂತೆ ತಿಳಿಸಿದರು.