ಹಾಸನ:ಚನ್ನರಾಯಪಟ್ಟಣ ತಾಲೂಕು ಕಗ್ಗಲಿ ಕಾವಲು ಗ್ರಾಮದಲ್ಲಿ ದಲಿತರಿಗೆ ಮಂಜೂರಾಗಿದ್ದ ಜಮೀನನ್ನು ಸವರ್ಣೀಯರು ಹಾಗೂ ಸರ್ಕಾರಿ ಅಧಿಕಾರಿಗಳು ಕಸಿದುಕೊಳ್ಳಲು ಯತ್ನಿಸುತ್ತಿದ್ದು, ಅನ್ಯಾಯದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎಂ. ಶಂಕರಪ್ಪ ಹೇಳಿದರು.
1962 ರಲ್ಲಿ ಗ್ರಾಮದ ಸರ್ವೇ ನಂ. 22ರಲ್ಲಿ 218 ಎಕರೆ ಜಮೀನನ್ನು 100ಕ್ಕೂ ಹೆಚ್ಚು ದಲಿತರಿಗೆ ತಲಾ ಎರಡು ಎಕರೆಯಂತೆ ಮಂಜೂರು ಮಾಡಲಾಗಿದೆ. ಈ ಸಂಬಂಧ ಮಂಜೂರಾತಿ ಪತ್ರ, ಪಹಣಿ ಎಲ್ಲವೂ ಇದೆ. ಫಲಾನುಭವಿಗಳು ವ್ಯವಸಾಯ ಮಾಡಿಕೊಂಡಿದ್ದಾರೆ. ಆದರೆ ಗ್ರಾಮದ ಸವರ್ಣೀಯರು ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂಬ ಸುಳ್ಳು ದಾಖಲೆ ಸೃಷ್ಟಿಸಿ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಎಂ. ಶಂಕರಪ್ಪ ಆರೋಪಿಸಿದರು.
ಗ್ರಾಮದ ಬಲಾಢ್ಯ ವ್ಯಕ್ತಿಯೊಬ್ಬರು ಭೂಮಿ ಕಬಳಿಸಲು ಯತ್ನಿಸುತ್ತಿದ್ದಾರೆ. ಈ ಸಂಬಂಧ ನ್ಯಾಯಾಲಯ ಮೆಟ್ಟಿಲೇರಿದ್ದು, ಉಪವಿಭಾಗಾಧಿಕಾರಿ ಕೋರ್ಟ್‌ನಲ್ಲಿ ಚರ್ಚೆ ನಡೆದಿದೆ. ಆ ಭೂಮಿ ಸರ್ಕಾರದ್ದಾಗಿದ್ದರೆ ವಶಪಡಿಸಿಕೊಂಡು ಅರಣ್ಯ ಅಭಿವೃದ್ಧಿ ಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ಆದೇಶಿಸಿದೆ. ಈ ನಿರ್ಧಾರದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು. 50 ದಲಿತ, 8 ಮುಸ್ಲಿಂ ಹಾಗೂ ಇತರ ಸಮುದಾಯ ಜನರು ಭೂಮಿ ಅನುಭವಿಸುತ್ತಿದ್ದಾರೆ. ಈಗ ಏಕಾಏಕಿ ತೆರವುಗೊಳಿಸಿದರೆ ಎಲ್ಲಿಗೆ ಹೋಗಬೇಕು. ಸಂವಿಧಾನ ಬರೆದ ಮಹಾನುಭಾವ ದಲಿತನೇ ಆಗಿದ್ದರೂ ಆ ಸಮುದಾಯಕ್ಕೆ ಬದುಕುವ ಸ್ವಾತಂತ್ರ್ಯ ಇಲ್ಲದಾಗಿದೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.ದೇಶಕ್ಕೆ ಪ್ರಧಾನಿಯನ್ನು ಕೊಟ್ಟ ಹಾಸನ ಜಿಲ್ಲೆಯಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ. ಸ್ವಂತ ಊರಿನ ಸಮಸ್ಯೆ ಬಗೆಹರಿಸಲು ಆಗದ ಅವರು ದೇಶಕ್ಕೆ ಯಾವ ಕೊಡುಗೆ ಸಲ್ಲಿಸಿದ್ದಾರೆ ಎಂಬುದನ್ನು ಅಂದಾಜಿಸಬಹುದು. ನ್ಯಾಯಾಲಯ ಆದೇಶಕ್ಕೆ ತಡೆ ತಂದು ಭೂಮಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.
ಆ್ಯಪ್ ಲೋಕಾರ್ಪಣೆ:
ಕರ್ನಾಟಕ ಮಾದಿಗ ದಂಡೋರ ಸಮಿತಿಯಿಂದ ಫೆ. 10 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಮಾದಾರ ಚೆನ್ನಯ್ಯ ಜಯಂತಿ ಹಾಗೂ ಮಾದಿಗ ಆ್ಯಪ್ ಲೋಕಾರ್ಪಣೆ ಸಮಾರಂಭ ಆಯೋಜಿಸಲಾಗಿದೆ ಎಂದು ತಿಳಿಸಿದರು.ನಮ್ಮ ಸಮಾಜದ ಸ್ವಾಭಿಮಾನ ಹಾಗೂ ಇತಿಹಾಸವನ್ನು ನೆನಪಿಸುವ ಸಮಾಜದ ಮಾದಿಗ ಆ್ಯಪ್ ಬಿಡುಗಡೆ ಮಾಡಲಾಗುವುದು. ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಮಾರಾದ ಚೆನ್ನಯ್ಯ ಸ್ವಾಮೀಜಿ, ಕೋಡಿಹಳ್ಳಿ ಪೀಠದ ಮಾರ್ಕಾಂಡೇಯ, ಹಿರಿಯೂರಿನ ಷಡಕ್ಷರ ಮುನಿ ಸ್ವಾಮೀಜಿ ಹಾಗೂ ಹಂಪಿ ಮಾತಂಗ ಮಹರ್ಷಿ ಆಶ್ರಮದ ಪೂರ್ಣಾನಂದ ಭಾರತಿ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದರು.ಮಾದಿಗ ದಂಡೋರ ಸಮಿತಿ ರಾಜ್ಯ ಕಾರ್ಯದರ್ಶಿ ಗಂಜಿಗೆರೆ ರಾಜು, ವೆಂಕಟೇಶ್ ಅಮಟಿ, ಶಂಕರರಾಜು, ಸುರೇಶ್, ಫಾರೂಕ್ ಅಹ್ಮದ್ ಇತರರು ಸುದ್ದಿಗೋಷ್ಟಿ ವೇಳೆ ಹಾಜರಿದ್ರು.