ಹಾಸನ:ಹಗ್ಗ ಜಗ್ಗಾಟದ ನಡುವೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಹಾಗೂ ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ನೇಮಕವಾಗಿದ್ದಾರೆ.
ಜೆಡಿಎಸ್ ಭದ್ರಕೋಟೆ ಹಾಸನಕ್ಕೆ ಹೆಚ್ ಡಿ ರೇವಣ್ಣ ಸೂಪರ್ ಸಿಎಂ ಇದ್ದಂತೆ. ಕಳೆದ ಸಿದ್ದರಾಮಯ್ಯನವರ ಆಡಳಿತದಲ್ಲಿ ಡಾ. ಹೆಚ್ ಸಿ ಮಹಾದೇವಪ್ಪನವರನ್ನ ಜಿಲ್ಲಾ ಉಸ್ತುವಾರಿಯಾಗಿ ನೇಮಿಸಿದ್ದರೂ ಜಿಲ್ಲೆಗೆ ಬಂದಾಗಲೆಲ್ಲಾ ಹಲವು ಬಾರಿ ಜೆಡಿಎಸ್ ನಾಯಕರುಗಳನ್ನ ಹೊಗಳಿಯೇ 5 ವರ್ಷ ಪೂರೈಸಿದ್ದರು. ಬಳಿಕ ಹೈಕಮಾಂಡ್ ಬೆಂಬಲದಿಂದ ಮಂತ್ರಿಗಿರಿ ಪಡೆದ ಎ.ಮಂಜು, ಜಿಲ್ಲಾ ಉಸ್ತುವಾರಿಯಾದಾಗಲೂ ಕಾಂಗ್ರೆಸ್ ಪಕ್ಷವನ್ನ ಕಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ಜಿಲ್ಲೆಗೆ ಬರುವಂತಹ ಕೆಲವು ನಾಯಕರು ಮಾಜಿ ಪ್ರಧಾನಿಯ ಕುಟುಂಬವನ್ನ ಹೊಗಳಿಯೇ ಅಧಿಕಾರ ಅನುಭವಿಸಿದ್ರು.
ಆದರೆ, ಜೆಡಿಎಸ್ ಭದ್ರಕೋಟೆಯನ್ನ ಬಿಜೆಪಿ ತನ್ನ ತೆಕ್ಕೆಗೆ ಏನಾದ್ರೂ ಮಾಡಿ ಪಡೆಯಲೇಬೇಕು ಎಂಬ ಹಠದೊಂದಿಗೆ ಮತ್ತು ದೇವೇಗೌಡರ ಕುಟುಂಬವನ್ನ ಎದುರಿಸುವ ಸಮರ್ಥ ಜಿಲ್ಲಾ ಉಸ್ತುವಾರಿಯನ್ನ ನೇಮಿಸಲು ಯೋಚಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನ ಮತ್ತು ಅವರ ಕುಟುಂಬದ ವಿರುದ್ದ ಧ್ವನಿ ಎತ್ತಿದ್ದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶಾಸಕ ಜೆ ಸಿ ಮಾಧುಸ್ವಾಮಿಯವರೇ ಸೂಕ್ತ ಎಂದು ಭಾವಿಸಿ ಕೊನೆಗೂ ಹಾಸನ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿಯಾಗಿ ಬಿಜೆಪಿ ಹೈಕಮಾಂಡ್ ನೇಮಕ ಮಾಡಿದೆ.
ಕಾನೂನು, ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವರಾಗಿರೋ ಜೆ ಸಿ ಮಾಧುಸ್ವಾಮಿಗೆ ಹಾಸನ ಜಿಲ್ಲೆಯ ಉಸ್ತುವಾರಿ ಕೊಟ್ಟರೆ ದೇವೇಗೌಡರ ಕುಟುಂಬವನ್ನ ಬಗ್ಗು ಬಡಿಯಬಹುದೆಂಬ ಆಲೋಚನೆ ಒಂದು ಕಡೆಯಾದ್ರೆ, ಜಿಲ್ಲೆಯ ಹೇಮಾವತಿ ನದಿಯ ನೀರನ್ನು ತುಮಕೂರು ಭಾಗಕ್ಕೆ ಹರಿಸಿಕೊಳ್ಳಲು ಹೆಚ್ಚಿನ ಅನುಕೂಲವಾಗುತ್ತದೆ. ಹೀಗಾಗಿ ಎರಡು ದೃಷ್ಠಿಯಿಂದಲೂ ಹಾಸನಕ್ಕೆ ನೇಮಕ ಮಾಡಿರುವುದು ಜಿಲ್ಲೆಯ ಕೇಸರಿ ಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ. ಈ ಹಿಂದೆ ಹಾಸನಕ್ಕೆ ಒಕ್ಕಲಿಗ ಸಮುದಾಯದ ಸಿ ಟಿ ರವಿಯವರನ್ನ ನೇಮಕಮಾಡಬಹುದೆಂಬ ವದಂತಿ ಹರಿದಾಡುತ್ತಿತ್ತು. ಆದರೆ, ಕೊನೆಗೆ ಲಿಂಗಾಯಿತರನ್ನ ಉಸ್ತುವಾರಿ ಮಾಡುವ ಮೂಲಕ ವದಂತಿಗೆ ಬಿಜೆಪಿ ಸರ್ಕಾರ ತೆರೆ ಎಳೆದಿದೆ.