ಹಾಸನ/ರಾಮನಾಥಪುರ/ಅರಕಲಗೂಡು:ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಈವರೆಗೆ ₹ 83 ಕೋಟಿ ಆಸ್ತಿ, ಪಾಸ್ತಿ, ಬೆಳೆ ಹಾನಿಯಾಗಿದೆ. ಪರಿಹಾರ ಕಾರ್ಯಕ್ಕೆ ಸರ್ಕಾರ ತಕ್ಷಣ ₹ 50 ಕೋಟಿ ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಲೇಶಪುರದಲ್ಲಿ₹ 49.38 ಕೋಟಿ, ಹಾಸನದಲ್ಲಿ₹ 13.66 ಕೋಟಿ, ಅರಕಲಗೂಡಿನಲ್ಲಿ₹ 8 ಕೋಟಿ, ಬೇಲೂರಿನಲ್ಲಿ ₹ 2.4 ಕೋಟಿ ಹಾಗೂ ಆಲೂರು ತಾಲೂಕಿನಲ್ಲಿ₹ 43 ಕೋಟಿ ಹಾನಿಯಾಗಿದೆ. 522 ಶಾಲಾ ಕಟ್ಟಡ, 304 ಅಂಗನವಾಡಿಗಳು, 130 ಕೆರೆಗಳು, 1820 ಕಿ.ಮೀ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹಾನಿಯಾಗಿದೆ. 700 ಹೆಕ್ಟೇರ್ ಆಲೂಗೆಡ್ಡೆ, 48 ಹೆಕ್ಟೇರ್, ತೆಂಗು, 70 ಹೆಕ್ಟೇರ್ ಬಾಳೆ, 20 ಹೆಕ್ಟೇರ್ ಶುಂಠಿ ಮತ್ತು 100 ಹೆಕ್ಟೇರ್ ತರಕಾರಿ ಬೆಳೆಗಳು ಹಾನಿಯಾಗಿದ್ದು, ₹ 10 ಕೋಟಿ ಬೆಳೆ ನೀರು ಪಾಲಾಗಿದೆ ಎಂದು ವಿವರಿಸಿದರು.
ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಹರಿಯುವ ಕಾವೇರಿ ನದಿಯ ಪ್ರವಾಹದಿಂದ ಅರಕಲಗೂಡು ರಾಮನಾಥಪುರ ಕೊಣನೂರು ಭಾಗದಲ್ಲಿ ಸಾಕಷ್ಟು ಹಾನಿಯಾಗಿತ್ತು. ಸುಮಾರು 40ಕ್ಕೂ ಅಧಿಕ ಮನೆಗಳು ಕುಟುಂಬಗಳಿಗೆ ಶಾಸಕ ಎ.ಟಿ.ರಾಮಸ್ವಾಮಿ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಅಧಿಕಾರಿಗಳೊಂದಿಗೆ ನೆರೆಪೀಡಿತ ಪ್ರದೇಶಗಳನ್ನು ವೀಕ್ಷಿಸಿದರು. ನೆರೆ ಪೀಡಿತರಿಗಾಗಿ ತಂಬಾಕು ಮಾರಾಟ ಮಂಡಳಿ ಸಮೀಪ 6 ಎಕರೆ ಜಾಗ ಮೀಸಲಿಡಲಾಗಿದೆ. ಸಂತ್ರಸ್ತರು ಅಲ್ಲಿಗೆ ಹೋಗಬೇಕು. ಸರ್ಕಾರದಿಂದ ನಿವೇಶನ ಹಾಗೂ ಮನೆ ಕಟ್ಟಿಸಿ ಕೊಡುವಂತಹ ಕೆಲಸವನ್ನು ಕೂಡ ಮಾಡಿಸುತ್ತೇನೆ ಎಂದರು.
ಜಿಲ್ಲೆಯ ಮೂರು ಜೀವನದಿಗಳಾದ ಹೇಮಾವತಿ, ಯಗಚಿ ಹಾಗೂ ವಾಟೆಹೊಳೆ ಜಲಾಶಯಗಳ ಕ್ರಸ್ಟ್ ಗೇಟ್ಗಳ ಮೂಲಕ ನೀರನ್ನು ಹರಿಸಲಾಗುತ್ತದೆ. ಹೇಮಾವತಿ ಜಲಾಶಯಕ್ಕೆ ಶುಕ್ರವಾರ ಸಂಜೆ ವೇಳೆಗೆ 11 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 75 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಆಗಸ್ಟ್ 10ರಂದು ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ಹೊರತುಪಡಿಸಿ ಎಲ್ಲಾ ತಾಲೂಕುಗಳ ಅಂಗನವಾಡಿ, ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷ ಆದೇಶ ಹೊರಡಿಸಿದ್ದಾರೆ.
ಅರಕಲಗೂಡು: ಭಾರೀ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ರಾಮನಾಥಪುರದ ರಾಮೇಶ್ವರ ದೇವಾಲಯದ ಬಳಿಯ ಕೊಲ್ಲಿಯಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುವ ಮುನ್ನವೇ ಸಾಮಾಗ್ರಿಗಳನ್ನು ಬಹುತೇಕ ಹೊರ ಸಾಗಿಸಲಾಗಿದೆ. ಸ್ಥಳೀಯ ಆಡಳಿತದವರು ನಿವಾಸಿಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ಅಲ್ಲಿಯೇ ಅವರಿಗೆ ಊಟ ತಿಂಡಿಗಳನ್ನು ಪೂರೈಸುವ ಕ್ರಮಕೈಗೊಂಡಿದ್ದಾರೆ.
ರಾಮೇಶ್ವರ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನಿಂದ ಆವೃತವಾಗಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ರಾಮಸ್ವಾಮಿ ಅವರು ಆಡಳಿತಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲಿ ವಾಸಿಸುವ ನಿವಾಸಿಗಳಿಗೆ ಗಂಜಿ ಕೇಂದ್ರ ತೆರೆಯಲಾಗಿದೆ. ಮುಂಜಾಗ್ರತೆಯಾಗಿ ರಾಮನಾಥಪುರದಲ್ಲಿ ಅಗ್ನಿಶಾಮಕ ವಾಹನ ಹಾಗೂ ಬೋಟ್‌ಗಳನ್ನು ತರಿಸಲಾಗಿದೆ.