ಹಾಸನ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಉಲ್ಬಣವಾಗಿದ್ದು ಹಾಸನದಲ್ಲಿ ಮತ್ತೆ ವಾರದಲ್ಲಿ 4 ದಿನ ಸಂಪೂರ್ಣ ಲಾಕ್‍ಡೌನ್ ಜಾರಿಯಾಗಿದೆ. ಹೀಗಾಗಿ ಕೂಲಿ ಕಾರ್ಮಿಕರಿಗೆ ಮತ್ತು ಆಟೋ ಚಾಲಕರ ಕುಟುಂಬಗಳು ಸಂಕಷ್ಟ ಎದುರಿಸಬೇಕಾಗಿದೆ.
ಹೌದು, ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು, ಆಟೋ-ಟ್ಯಾಕ್ಸಿ ಓಡಿಸಿಕೊಂಡು ದಿನದ ದುಡಿಮೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಕೋಟ್ಯಂತರ ಕುಟುಂಬಗಳು ರಾಜ್ಯದಲ್ಲಿವೆ. ಅದರಲ್ಲಿ ಆಟೋ ಚಾಲನೆ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತಿರುವವರು ಲಕ್ಷಾಂತರ ಮಂದಿ. ಕಳೆದ ಬಾರಿಯ ಕೋವಿಡ್ ಸಂದರ್ಭದಲ್ಲಿ ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಒಂದಿಷ್ಟು ಆರ್ಥಿಕ ಸಹಾಯ ಮಾಡಿತ್ತು. ಆದ್ರೆ ಈ ಬಾರಿ 2ನೇ ಅಲೆಯಲ್ಲಿ ಯಾವುದೇ ಪ್ಯಾಕೇಜ್ ಕೂಡಾ ಘೋಷಣೆ ಮಾಡಿಲ್ಲ.
ಆಟೋ ಚಾಲಕರ ಮೇಲೆ ಲಾಕ್‍ಡೌನ್ ಎಫೆಕ್ಟ್ ಹಾಸನ ಜಿಲ್ಲೆಯಲ್ಲಿ ಸರಿಸುಮಾರು 8-10 ಸಾವಿರಕ್ಕೂ ಹೆಚ್ಚು ಆಟೋಗಳಿವೆ. ಎರಡನೇ ಅಲೆ ಪ್ರಾರಂಭವಾದ ಬಳಿಕ ತಮ್ಮ ಆಟೋಗಳನ್ನು ರಸ್ತೆಗೆ ಇಳಿಸಲು ಸಾಧ್ಯವಾಗದೆ, ಇತ್ತ ಆಟೋ ಖರೀದಿಸಲು ಮಾಡಿದ್ದ ಸಾಲವನ್ನು ಬ್ಯಾಂಕುಗಳಿಗೆ ಮರು ಪಾವತಿ ಮಾಡಲಾಗದೆ ಚಾಲಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಇದರ ಜತೆಗೆ ಬ್ಯಾಂಕುಗಳು ನೋಟಿಸ್ ಜಾರಿ ಮಾಡುತ್ತಿರುವುದು ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ಸೃಷ್ಟಿಸಿದೆ.
ಆಟೋ ಚಾಲಕರು ಏನಂತಾರೆ?
ಈ ಕುರಿತು ಪ್ರತಿಕ್ರಿಯಿಸಿರುವ ಹಾಸನ ಆಟೋ ಚಾಲಕರು, ಕಳೆದ 30 ದಶಕಗಳಿಂದ ನಾವು ಆಟೋ ಚಾಲನೆ ವೃತ್ತಿಯನ್ನೇ ಮಾಡುತ್ತಿದ್ದೇವೆ. ಆದ್ರೆ ಇದ್ರಿಂದ ನಾವುಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಲಾಕ್‍ಡೌನ್ ಆದ ಬಳಿಕ ಸುಮಾರು 70 ಸಾವಿರಕ್ಕೂ ಅಧಿಕ ಸಾಲ ಮಾಡಿದ್ದೇವೆ. ದುಡಿಮೆ ಇಲ್ಲದೇ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ಅಂತರ ಎಂದು ಹೇಳುತ್ತಾ ನಮ್ಮ ಬದುಕಿಗೆ ಆಧಾರವಾಗಿದ್ದ ಎಲ್ಲಾ ಕ್ಷೇತ್ರವನ್ನು ಲಾಕ್ ಮಾಡುತ್ತಿರುವುದು ನಮ್ಮ ಬದುಕಿನ ಮೇಲೆ ತಣ್ಣೀರೆರಚಿದಂತಾಗಿದೆ. ಕಳೆದ ಬಾರಿ ಪರಿಹಾರದ ಹಣ ಹಾಕುವ ನೆಪದಲ್ಲಿ ಮೂಗಿಗೆ ತುಪ್ಪ ಸುರಿದ್ರು ಅಷ್ಟೇ. ಲಾಕ್‍ಡೌನ್ ಸಂದರ್ಭದಲ್ಲಿ ಅಲ್ಲೋ ಇಲ್ಲೋ ಆಟೋ ಓಡಾಟ ನಡೆಸುತ್ತಿವೆ ಎಂದ್ರೆ ಅದು ರೋಗಿಗಳಿಗಾಗಿ ಎಂದು ಪೊಲೀಸರು ತಿಳಿಯಬೇಕು ಎಂದು ಹೇಳುತ್ತಾರೆ.
ಲಾಕ್‍ಡೌನ್ ನಿಂದ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಮನೆ ಬಾಡಿಕೆ ಕಟ್ಟಲು ತುಂಬಾ ಕಷ್ಟವಾಗುತ್ತಿದೆ. ಮನೆ ಮಾಲೀಕರು 100 ರೂ. ಕಡಿಮೆ ಕೊಟ್ರು ತೆಗೆದುಕೊಳ್ಳುವುದಿಲ್ಲ. ಪ್ರತಿ ತಿಂಗಳು 6-7 ಸಾವಿರ ಮನೆ ಬಾಡಿಗೆ, ವಿದ್ಯುತ್ ಬಿಲ್, ಮೊಬೈಲ್ ರಿಚಾರ್ಚ್, ಮಕ್ಕಳಿಗೆ ಬೇಕಾದ ಶಾಲಾ ಪುಸ್ತಕಗಳು, ಹೀಗೆ ಸಾವಿರಾರು ರೂ. ಖರ್ಚಾಗುತ್ತದೆ. ಲಾಕ್‍ಡೌನ್ ನಿಂದ ದಿನಕ್ಕೆ ಕನಿಷ್ಠ 200 ರೂ. ಸಂಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂದಿನ ಇಂಧನ ದರದಲ್ಲಿಯೂ ಕೂಡ ನಾವು ಕಳೆದ 4-5 ದಶಕಗಳಿಂದಲೂ ಪ್ರಯಾಣಿಕರಿಂದ ಕೇವಲ 20 ರಿಂದ 30 ರೂಪಾಯಿ ಪಡೆಯುತ್ತಿದ್ದೇವೆ. ತಿಂಗಳಿಗೆ ಏನಿಲ್ಲಾ ಅಂದ್ರೂ ಒಂದು ಕುಟುಂಬ ನಿರ್ವಹಣೆ ಮಾಡಲು ಕನಿಷ್ಠ 10 ಸಾವಿರ ಬೇಕು. ಆದ್ರೆ ಪ್ರತಿತಿಂಗಳು ನಾವು ಸಾಲ ಮಾಡಬೇಕಾದ ಪರಿಸ್ಥತಿ ಇದೆ. ಹೀಗಾಗಿ ನಮಗೆ ಪ್ಯಾಕೇಜ್ ಘೋಷಣೆ ಮಾಡಿದ್ರೆ ಒಳ್ಳೆಯದು. ಇಲ್ಲವಾದ್ರೆ ಬದುಕುವುದಕ್ಕೆ ಸಾಧ್ಯವಾಗದೇ ಪ್ರಾಣ ಬಿಡಬೇಕಾಗುತ್ತದೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡರು.
ಇದನ್ನೂ ಓದಿ:ಹಾಸನದಲ್ಲಿ ವಾರದ ನಾಲ್ಕು ದಿನ ಸಂಪೂರ್ಣ ಲಾಕ್‍ಡೌನ್: ಗೋಪಾಲಯ್ಯ