ಹಾಸನ:ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಲೆಟರ್ ಹೆಡ್ ಹಾಗೂ ಸಹಿ ನಕಲು ಮಾಡಿ ಸರ್ಕಾರಿ ನೌಕರರೊಬ್ಬರು ವರ್ಗಾವಣೆ ಬಯಸಿದ್ದರು ಎಂಬ ಪತ್ರವೊಂದು ವೈರಲ್ ಆಗಿದೆ.
ಹೇಮಾವತಿ ಜಲಾಶಯ ಯೋಜನೆ ಮಂಜೂರು ಶಾಖೆಯಲ್ಲಿ ಎಫ್‌ಡಿಎಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರವಿಶಂಕರ್ ಎಂಬುವರು ರೇವಣ್ಣನವರ ನಾಮ ಬಲದಿಂದ ದುದ್ದ ಹೋಬಳಿ ಕಂದಾಯ ನಿರೀಕ್ಷಕರಾಗಿ ವರ್ಗಾವಣೆ ಹಾಗೂ ಬಡ್ತಿ ಬಯಸಿದ್ದರು ಎಂಬ ಶಿಫಾರಸು ಪತ್ರ ವೈರಲ್ ಆಗಿದೆ. ಆದರೆ, ಈ ಆರೋಪವನ್ನು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಳ್ಳಿಹಾಕಿದ್ದು, ತಮಗೆನೂ ಗೊತ್ತಿಲ್ಲ. ಅದು ನಮ್ಮ ಲೆಟರ್ ಹೆಡ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ಹೆಚ್.ಡಿ. ರೇವಣ್ಣ 2001ರಲ್ಲಿ ಉದ್ಯೋಗಕ್ಕೆ ಸೇರಿರುವ ರವಿಶಂಕರ್ ಚನ್ನರಾಯಪಟ್ಟಣ ತಹಸೀಲ್ದಾರ್ ಭೂಮಿ ಶಾಖೆಯಿಂದ ವೃತ್ತಿ ಪ್ರಾರಂಭಿಸಿದ್ದಾರೆ. ನಂತರ ದುದ್ದ, ಚಿಕ್ಕಕಡಲೂರಿನಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನಿಭಾಯಿಸಿದ್ದಾರೆ. 2019ರ ನವೆಂಬರ್‌ನಲ್ಲಿ ಹೇಮಾವತಿ ಜಲಾಶಯ ಯೋಜನೆ ವಿಭಾಗಕ್ಕೆ ಬಡ್ತಿಯೊಂದಿಗೆ ವರ್ಗಾವಣೆ ಆಗಿದ್ದಾರೆ. ಆದರೆ, ಈಗ ದುದ್ದ ಹೋಬಳಿ ಕಂದಾಯ ನಿರೀಕ್ಷಕ ಹುದ್ದೆಗಾಗಿ ರೇವಣ್ಣ ಅವರ ಹೆಸರು ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಲೆಟರ್ ಹೆಡ್ ಹಾಗೂ ಸಹಿ ನಕಲು ಮಾಡಿದ್ದಾರೆ ಎನ್ನಲಾದ ಪತ್ರ ವೈರಲ್ ಇನ್ನು ಅಧಿಕಾರಿಗಳ ವರ್ಗಾವಣೆ ಅಧಿಕಾರ ಜಿಲ್ಲಾಧಿಕಾರಿಗೆ ಇದ್ದು ಹೆಚ್.ಡಿ. ರೇವಣ್ಣ ಅವರ ಹೆಸರಿನ ಶಿಫಾರಸು ಪತ್ರವನ್ನು ಡಿಸಿಗೆ ಕಳುಹಿಸುವ ಬದಲು ಉಪವಿಭಾಗಾಧಿಕಾರಿಗೆ ಬರೆಯಲಾಗಿದೆ. ಹೀಗೆ ಲೆಟರ್ ಹೆಡ್‌ನಲ್ಲಿ ಸಾಕಷ್ಟು ತಪ್ಪುಗಳಿದ್ದು, ರವಿಶಂಕರ್ ಅವರೇ ಈ ಕೆಲಸ ಮಾಡಿದ್ದಾದರೆ, ಈ ಪತ್ರದಲ್ಲಿ ತಪ್ಪು ತಪ್ಪಾಗಿ ಬರೆದಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ.
ಶಿಫಾರಸು ಪತ್ರ ಸಂಪೂರ್ಣ ಕಪ್ಪಾಗಿದ್ದು ಅಕ್ಷರಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ರವಿಶಂಕರ್ ಅವರ ವಿರೋಧಿ ಬಣ ಹೀಗೆ ಮಾಡಿರಬಹುದು ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.