ಹಾಸನ:ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಬೋನಿಗೆ ಬಿದ್ದ ಚಿರತೆ... ನಿಟ್ಟುಸಿರು ಬಿಟ್ಟ ಹಾಸನ ಜನತೆ - hassan leopard news
ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಬೆಣಗಟ್ಟೆ ಗ್ರಾಮದಲ್ಲಿ ಚಿರತೆಗಳ ಹಾವಳಿ ಜೋರಾಗಿದೆ. ಸದ್ಯ ತಾಲೂಕು ವಲಯ ಅರಣ್ಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಬೆಣಗಟ್ಟೆ ಗ್ರಾಮದಲ್ಲಿ ಚಿರತೆಗಳ ಹಾವಳಿ ಜೋರಾಗಿಯೇ ಇದೆ. ಕಳೆದ ಹದಿನೈದು ದಿನಗಳ ಈಚೆಗೆ ಎರಡು ಕುರಿ ಮತ್ತು ಹಸು ಕರುವನ್ನು ಚಿರತೆ ಬಲಿ ತೆಗೆದುಕೊಂಡಿತ್ತು. ಪರಿಣಾಮ ಈ ಭಾಗದ ಜನರು ಬೆಳಗಿನ ಹೊತ್ತು ತಮ್ಮ ಜಮೀನುಗಳಿಗೆ ಹೋಗಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆಯನ್ನು ಹಿಡಿದು ಸ್ಥಳಾಂತರ ಮಾಡಬೇಕು ಎಂದು ಬೆಣಗಟ್ಟೆ, ಶಾಂತಿಗ್ರಾಮ, ಮುದ್ದನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಭಾಗದ ರೈತರು ಹಾಸನ ತಾಲೂಕು ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ್ದರು.
ಅದರಂತೆ ಅರಣ್ಯ ಅಧಿಕಾರಿಗಳು 3 ದಿನಗಳ ಹಿಂದೆ ಬೆಣಗಟ್ಟೆ ಗ್ರಾಮದ ಹೊರವಲಯದ ಕುರುಚಲು ಗಿಡದ ನಡುವೆ ಚಿರತೆ ಸೆರೆಗೆ ಬೋನ್ ಇಟ್ಟಿದ್ದರು. ಬೋನಿಗೆ ಹೆಣ್ಣು ಚಿರತೆಯೊಂದು ಬಿದ್ದಿದ್ದು, ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬೋನಿಗೆ ಬಿದ್ದ ಚಿರತೆಯ ಆರ್ಭಟವನ್ನು ಕೇಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದು, ವಿಷಯವನ್ನು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆ ತಕ್ಷಣ ಸ್ಥಳಕ್ಕೆ ಅಧಿಕಾರಿಗಳು ಭೇಟಿ ಕೊಟ್ಟು, ಬೋನಿಗೆ ಬಿದ್ದ ಚಿರತೆಯನ್ನು ಸದ್ಯ ಅರಣ್ಯ ಇಲಾಖೆಯ ಕಚೇರಿಗೆ ಒಯ್ದಿದ್ದಾರೆ. ಮೇಲಾಧಿಕಾರಿಗಳ ಆದೇಶದಂತೆ ಮೈಸೂರು ಮೃಗಾಲಯ ಅಥವಾ ಚಾಮರಾಜನಗರ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಯೊಬ್ಬರು ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.