ಹಾಸನ :ರಾಜ್ಯದಲ್ಲಿ ಎಂಎಲ್ಸಿ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ, ಜೆಡಿಎಸ್ ಭದ್ರಕೋಟೆ ಹಾಸನದ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿವೆ. ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
ಜಿಲ್ಲೆಯ ರಾಜಕೀಯ ಭದ್ರಕೋಟೆಯಾಗಿರುವ ಪ್ರಮುಖ ಪ್ರಾದೇಶಿಕ ಪಕ್ಷ ಎಂದರೇ ಜೆಡಿಎಸ್. ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೇ ಇಲ್ಲಿ ಪ್ರಾಬಲ್ಯ ಹೊಂದಿದೆ. ಈ ಬಾರಿ ವಿಧಾನಪರಿಷತ್ ಚುನಾವನೆಗೆ ಕೇವಲ 3500 ರಷ್ಟು ಮಾತ್ರ ಮತದಾರರಿದ್ದಾರೆ. ಈ ಮತದಾರರನ್ನು ಸೆಳೆಯಲು ಮೂರು ಪಕ್ಷಗಳು ಸಿದ್ಧತೆ ನಡೆಸಿವೆ.
ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಇಂದು ಹಾಸನದಲ್ಲಿ ಸಭೆ ನಡೆದಿದೆ. ಮೇಲ್ಮನೆಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಈಗಾಗಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣಗೆ ಈ ಬಾರಿ ಟಿಕೆಟ್ ಗ್ಯಾರಂಟಿ ಎಂಬ ಮಾತು ಹರಿದಾಡುತ್ತಿವೆ. ಇಂದಿನ ದೇವೇಗೌಡರ ಸಭೆಯಲ್ಲಿಯೂ ದೇವೇಗೌಡರು ಕೂಡ ಹರಿದಾಡುತ್ತಿರುವ ಮಾತುಗಳು ನಿಜ ಎಂದು ಸ್ಪಷ್ಪಪಡಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್‌ನಿಂದ ಬೆಳೆದು ಬಂದವರು ಕಾಂಗ್ರೆಸ್-ಬಿಜೆಪಿಯಲ್ಲಿದ್ದಾರೆ. 2023ಕ್ಕೆ ಜೆಡಿಎಸ್ ಪಕ್ಷ ಇರಲ್ಲ ಅಂತಾ ಹೇಳಿಕೆ ನೀಡುತ್ತಿದ್ದಾರೆ. ನಾನು ಉತ್ಪ್ರೇಕ್ಷೆಯಿಂದ ಈ ಮಾತನ್ನು ಹೇಳುತ್ತಿಲ್ಲ. ಪಕ್ಷ ತೆಗೀತೀನಿ ಅಂದವರೇ ಮನೆಬಾಗಿಲಿಗೆ ಬರಬಹುದು. ಹೀಗಾಗಿ, ನಾನು ಹಾಸನದಲ್ಲಿ ಪ್ರತಿ ತಾಲೂಕಿನಲ್ಲಿ ಸಭೆ ಮಾಡುತ್ತೇನೆ.
ಇವತ್ತಿನ ಸಭೆಯಲ್ಲಿ ಭವಾನಿ ರೇವಣ್ಣ ಮತ್ತು ಸೂರಜ್ ರೇವಣ್ಣ ಹೆಸರು ಕೇಳಿ ಬಂದಿದೆ. ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿ ಅಂತಿಮಗೊಳಿಸುತ್ತೇವೆ. ಪಕ್ಷಕ್ಕೆ ಕೆಲಸ ಮಾಡಿದ ಕಾರ್ಯಕರ್ತರು ಸಾಕಷ್ಟು ಮಂದಿ ಇದ್ದಾರೆ. ಮುಂದೆ ಕಾರ್ಯಕರ್ತರನ್ನು ಕಡೆಗಣಿಸಿದರು ಎಂಬ ಭಾವನೆ ಯಾರಿಗೂ ಬರಬಾರದು.
ನಮ್ಮ ಕುಟುಂಬದಲ್ಲಿ ಇದುವರೆಗೂ ಯಾರು ಎಂಎಲ್ಸಿ ಆಗಿಲ್ಲ. ಕೆಲಸ ಮಾಡಿದ ಕಾರ್ಯಕರ್ತರು ಬಹಳ ಜನರಿದ್ದಾರೆ. ಈಗಾಗಲೇ ನಾನು ಕೆಲ ಸಮಾಜದ ಜನರನ್ನು ನಾವು ಎಂಎಲ್ಸಿ ಮಾಡಿದ್ದೇವೆ ಎಂದರು. ಹೀಗಾಗಿ, ಇಂದಿನ ಈ ಬೆಳವಣಿಗೆಗಳ ನಡುವೆ ಇದೀಗ ಪರಿಷತ್ ಚುನಾವಣೆಗೆ ಬಹುತೇಕ ಸೂರಜ್ ಹೆಸರು ಕೇಳಿ ಬಂದಿದೆ.
ಹೆಚ್.ಡಿ. ದೇವೇಗೌಡ ನೇತೃತ್ವದ ಸಭೆಯಲ್ಲಿ ಶಾಸಕರುಗಳಾದ ಕೆ.ಎಸ್.ಲಿಂಗೇಶ್ ಮತ್ತು ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣರವರು ಮಾತ್ರ ಭವಾನಿ ರೇವಣ್ಣಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ. ಇದರೊಂದಿಗೆ ದೇವೇಗೌಡ ಕುಟುಂಬದಿಂದ ಮತ್ತೊಬ್ಬರು ವಿಧಾನಸೌಧ ಪ್ರವೇಶಿಸಿದಂತಾಗುತ್ತದೆ.
ನಮ್ಮ ಕ್ಷೇತ್ರದಲ್ಲಿ 500 ಗ್ರಾಪಂ ಸದಸ್ಯರು ಇದ್ದಾರೆ. ಇದರಲ್ಲಿ ನಮ್ಮ ಪಕ್ಷದಿಂದ 390 ಸದಸ್ಯರು ಗೆದ್ದಿದ್ದಾರೆ. ಇನ್ನೂ 40-50 ಮತಗಳನ್ನ ಹೆಚ್ಚುವರಿಯಾಗಿ ಹಾಕಿಸುತ್ತೇವೆ. ನಮ್ಮ ಪಕ್ಷ ಗ್ರಾಮೀಣ ಮಟ್ಟದಲ್ಲಿ ಪ್ರಬಲವಾಗಿದೆ. ಹಾಗಾಗಿ, ನಮಗೆ ಗೆಲುವು ಸಿಕ್ಕೇ ಸಿಗುತ್ತೆ. ಶಾಸಕ ಲಿಂಗೇಶ್ ಅಭಿಪ್ರಾಯವನ್ನು ನಾನೂ ಬೆಂಬಲಿಸುತ್ತೇನೆ. ಅಂತಿಮವಾಗಿ ನಮ್ಮ ನಾಯಕರಾದ ದೇವೇಗೌಡರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ನಾವು ಬದ್ದ ಎಂದು ಶಾಸಕ ಬಾಲಕೃಷ್ಣ ಕೂಡ ದನಿಗೂಡಿಸಿದರು.