ಹಾಸನ:ಹೇಮಾವತಿ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದ್ದು ಉಪನ್ಯಾಸಕರೊಬ್ಬರು ಸಾವಿಗೀಡಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ತುಳಸಿ ಪ್ರಸಾದ್ (32) ಸಾವಿಗೀಡಾದ ಮೃತ ಉಪನ್ಯಾಸಕ. ನಿನ್ನೆ ಮಧ್ಯಾಹ್ನ ರಜೆ ಇದ್ದುದರಿಂದ ಚನ್ನರಾಯಪಟ್ಟಣ ಸಮೀಪದ ಶ್ರವಣಬೆಳಗೊಳದಲ್ಲಿ ಹಾದುಹೋಗಿರುವ ಹೇಮಾವತಿಯ ಉಪ ನಾಲೆ ಸಾಹುಕಾರ್ ಚನ್ನಯ್ಯ ನಾಲೆಯಲ್ಲಿ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಇಳಿದಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ನಾಲೆಯು ಪೂರ್ಣ ಪ್ರಮಾಣದಲ್ಲಿ ತುಂಬಿ ಹರಿಯುತ್ತಿರುವುದರಿಂದ ಮೃತದೇಹದ ಹುಡುಕಾಟಕ್ಕೆ ಸ್ವಲ್ಪ ಕಷ್ಟವಾಗಿತ್ತು. ಇಂದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಬೈರಾಪುರ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕೆ ಆರ್ ಪೇಟೆಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.