ಹಾಸನ: ಅಭಿವೃದ್ಧಿ ಹೆಸರಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭ್ರಷ್ಟಾಚಾರ ಮಾಡುತ್ತಿದ್ದು, ತುಘಲಕ್ ಸಂತತಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ಡಿ.ರೇವಣ್ಣ ಅಧಿಕಾರಾವಧಿಯಲ್ಲಿ 13 ಸಾವಿರ ಕೋಟಿ ಅವ್ಯವಹಾರ ನಡೆಸಿದ್ದು, ಚರ್ಚೆಗೆ ಬಂದರೆ ದಾಖಲಾತಿ ಬಿಡುಗಡೆಗೊಳಿಸಲು ಸಿದ್ಧನಾಗಿದ್ದೇನೆ ಎಂದರು. ಹೊಳೆನರಸೀಪುರದ ಹೃದಯ ಭಾಗದಲ್ಲಿರುವ ಪುರಸಭೆಗೆ ಸೇರಿದ 7ರಿಂದ 7.5 ಕೋಟಿ ರೂ. ಬೆಲೆ ಬಾಳುವ 2 ನಿವೇಶಗಳನ್ನು ಹರಾಜು ಮಾಡಲು ಟೆಂಡರ್ ಕರೆಯಲಾಯಿತು. ಈ ಕುರಿತು ಆಯ್ದ ಪತ್ರಿಕೆಯಲ್ಲೂ ಜಾಹೀರಾತು ನೀಡಲಾಗಿತ್ತು. ಅದರೆ, ಅರ್ಜಿ ಸಲ್ಲಿಸಲು ಯಾರಿಗೂ ಅವಕಾಶ ಕಲ್ಪಿಸದೆ, ಸಚಿವರು ತಮಗೆ ಬೇಕಾದ ಇಬ್ಬರು ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿದ್ದಾರೆ. ಕೇವಲ 65 ಲಕ್ಷಕ್ಕೆ ಹರಾಜು ಪ್ರಕ್ರಿಯೆ ಮುಗಿಸಿ ಸರ್ಕಾರಕ್ಕೆ ಕೋಟಿ ಕೋಟಿ ಹಣ ವಂಚಿಸಿದ್ದಾರೆ. ಇದಕ್ಕೆ ಕೆಲ ಸರ್ಕಾರಿ ಅಧಿಕಾರಿಗಳ ಬೆಂಬಲವೂ ಇದೆ ಎಂದು ಆರೋಪಿಸಿದರು.