ಹಾಸನ : ಪ್ರತಿಯೊಬ್ಬರೂ ಕಾನೂನಿಗೆ ಗೌರವ ಕೊಡುವ ಮತ್ತು ಪರಿಪಾಲನೆ ಮಾಡುವುದು ಕಡ್ಡಾಯ ಆಗ ಮಾತ್ರ ದೇಶದ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎನ್.ಸಿ.ಶ್ರೀನಿವಾಸ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಮಾಹಿತಿ ಹಕ್ಕು ಅಧಿನಿಯಮ 2005ರ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಎನ್.ಸಿ ಶ್ರೀನಿವಾಸ ಎಲ್ಲ ನಾಗರಿಕರು ತಮ್ಮ ಸಾಮಾಜಿಕ ಹೊಣೆಗಾರಿಕೆ ಅರಿತು ಬದುಕಿದರೆ ದೇಶದ ಪ್ರಗತಿ ಹೆಚ್ಚುತ್ತದೆ ಎಂದರು. ಕಾನೂನು ಮನುಷ್ಯ ಜೀವನದ ಅವಿಭಾಜ್ಯ ಅಂಗ, ಅದರ ಪಾಲನೆ ಪ್ರತಿಯೊಬ್ಬರ ಹೊಣೆ ಎಂದರು.
ದೇಶದ ಸಮಗ್ರ ಅಭಿವೃದ್ದಿ ಸಾಧಿಸಲು ಕಾನೂನಿನ ಪರಿಪಾಲನೆ ಅಗತ್ಯ : ಎನ್.ಸಿ ಶ್ರೀನಿವಾಸ ಮಾಹಿತಿ ಹಕ್ಕು ಶ್ರೀಸಾಮಾನ್ಯರ ಅಧಿಕಾರ ಅದನ್ನು ಸಕಾಲದಲ್ಲಿ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ವಾರ್ಥ ಮನೋಭಾವವನ್ನು ಬಿಟ್ಟು ಸಾಮಾಜಿಕ ಕಳಕಳಿಯಿಂದ ಕಾರ್ಯ ನಿರ್ವಹಿಸಬೇಕು. ಕಾನೂನು ಕೇವಲ ವಕೀಲ ಹಾಗೂ ನ್ಯಾಯಾಧೀಶರಿಗಷ್ಟೇ ಸೀಮಿತವಾಗಿರದೇ ಸಮಾಜದ ಪ್ರತಿಯೊಬ್ಬರಿಗೂ ಅನ್ವಯವಾಗುವುದರಿಂದ ಗೌರವಿಸುವ ಸ್ವಯಂ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದರು.
ಮಾಹಿತಿ ಹಕ್ಕು ಅಧಿನಿಯಮದ ಅತ್ಯಂತ ಸರಳವಾದ ಹಾಗೂ ವಿಶ್ವದಲ್ಲೇ ಒಂದು ಉತ್ತಮ ಕಾಯ್ದೆಯಿದೆ. ಇದು ಪಾರದರ್ಶಕ ಆಡಳಿತಕ್ಕೆ ಪ್ರೋತ್ಸಾಹ ನೀಡುತ್ತಿದೆಯೆಂದು ಅಭಿಪ್ರಾಯಪಟ್ಟರು. ಸರಿಯಾಗಿ ಕಾನೂನನ್ನು ಅರ್ಥ ಮಾಡಿಕೊಂಡು ಪಾಲನೆ ಮಾಡಿದಾಗ ಹಾಗೂ ದಾಖಲೆಗಳನ್ನು ಸರಿಯಾಗಿ ಇರಿಸಿಕೊಂಡು ಕೆಲಸಮಾಡಿದಾಗ ಯಾವುದೇ ಆತಂಕಗಳಿಲ್ಲದಂತೆ ಸೇವೆ ಸಲ್ಲಿಸಬಹುದೆಂದು ಹೇಳಿದರು. ಪ್ರತಿಯೊಂದು ಇಲಾಖೆಯು ಸಾರ್ವಜನಿಕರಿಗೆ ಸಿಗುವಂತೆ ಮೂಲ ಮಾಹಿತಿಯನ್ನು ವೆಬ್‍ಸೈಟ್‍ಗಳಲ್ಲಿ ಪ್ರಕಟಿಸಬೇಕು ಅಲ್ಲಿ ಲಭ್ಯವಿಲ್ಲದಿರುವುದನ್ನು ಅರ್ಜಿ ಮೂಲಕ ಕಳುಹಿಸಬಹುದಾಗಿದೆಯೆಂದು ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶಿವಣ್ಣ ಮಾತನಾಡಿ, ಒಂದು ಒಳ್ಳೆ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ ರೂಪಿಸಲಾಗಿದೆ. ಅದು ಸದ್ಬಳಕೆಯಾಗಬೇಕು. ಸಾರ್ವಜನಿಕ ಹಿತಾಸಕ್ತಿಯಿಂದ ಕೇಳುವ ಮಾಹಿತಿಯನ್ನು ಸರಿಯಾದ ಸಮಯಕ್ಕೆ ನೀಡಬೇಕು. ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಬೇಕೆಂದರು.
ಈ ಸಂದರ್ಭದಲ್ಲಿ, ಜಿಲ್ಲಾಧಿಕಾರಿ ಆರ್.ಗಿರೀಶ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಸಿ.ಕೆ ಬಸವರಾಜು ಪ್ರಭಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜ್, ರಾಜ್ಯ ಮಾಹಿತಿ ಹಕ್ಕು ಆಯೋಗದ ಉಪಕಾರ್ಯದರ್ಶಿ ವೆಂಕಟರಮಣಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.