ಹಾಸನ :ಕೋವಿಡ್ ಲಾಕ್ಡೌನ್ ಹಿನ್ನೆಲೆ ಸುಮಾರು 10 ತಿಂಗಳುಗಳವರೆಗೂ ಮುಚ್ಚಿದ್ದ ಶಾಲಾ-ಕಾಲೇಜುಗಳು ಮತ್ತೆ ಪ್ರಾರಂಭವಾಗಿವೆ. ಇಂದು ಜಿಲ್ಲೆಯಲ್ಲಿ ಬಹುತೇಕ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳಿಗೆ ಹಾಜರಾಗುವ ಮೂಲಕ ಉತ್ತಮ ಪ್ರತಿಕ್ರಿಯೆ ದೊರೆತಂತಾಗಿದೆ.
ಪ್ರಾರಂಭವಾದ ಮೊದಲ ದಿನವೇ ಶಾಲಾ ಕಾಲೇಜಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು.. ಈ ಮೂಲಕ ಸುಮಾರು ಎಂಟು ತಿಂಗಳಿಂದ ಅಂತರ್ಜಾಲದ ಮೂಲಕ ನಡೆಯುತ್ತಿದ್ದ ಪಾಠಗಳಿಗೆ ಕೊಂಚ ಮಟ್ಟಿಗೆ ತೆರೆ ಎಳೆದಂತಾಗಿದೆ. ಆನ್ಲೈನ್ ಪಾಠ ಕೇಳುವ ಸಲುವಾಗಿ ಇಂಟರ್ನೆಟ್ ಸಮಸ್ಯೆ, ಇನ್ನೂ ಇತರೆ ಅಡೆತಡೆಗಳನ್ನು ಎದುರಿಸಿದ ಅದೆಷ್ಟೋ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.
ಕಾಲೇಜಿಗೆ ಬಂದು ಮೌಖಿಕವಾಗಿ ಪಾಠ ಕೇಳುವುದು ತುಂಬಾ ಖುಷಿ ಕೊಡುತ್ತಿದೆ. ಜೊತೆಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತಿದೆ ಎನ್ನುವುದು ವಿದ್ಯಾರ್ಥಿಗಳ ಮಾತಾಗಿದೆ.
ಹೊಸ ವರ್ಷದ ಮೊದಲ ದಿನವೇ ಶಾಲೆ ಪ್ರಾರಂಭವಾಗಿರುವ ಹಿನ್ನೆಲೆ ಮತ್ತು ಕೋವಿಡ್‌ಗೆ ಅಂಜಿ ಶೇ.30 ರಿಂದ 40ರಷ್ಟು ಮಕ್ಕಳು ಮಾತ್ರ ಶಾಲೆಗೆ ಹಾಜರಾಗಬಹುದು ಎಂಬ ನಿರೀಕ್ಷೆಯಿತ್ತು.
ಆದರೆ, ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಹಾಜರಾಗಿರುವುದು ನಮಗೆ ಬಹಳ ಖುಷಿ ತಂದಿದೆ ಎನ್ನುತ್ತಾರೆ ಶಿಕ್ಷಕರು. ಕೋವಿಡ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಬಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನ ಮಾತ್ರ ಬರಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಶಾಲಾ ಆಡಳಿತ ಮಂಡಳಿಯವರು.