ಹಾಸನ/ಸಕಲೇಶಪುರ:ಜಡಿ ಮಳೆಯಿಂದಾಗಿ ಶಿರಾಡಿ ಘಾಟ್ನ ಬೆಂಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತವಾಗಿದ್ದು, ಜು.14 ರಿಂದ ಮುಂದಿನ ಆದೇಶದವರೆಗೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು, ಕಾರುಗಳು, ಜೀಪ್, ದ್ವಿಚಕ್ರ ವಾಹನ ಹಾಗೂ ತುರ್ತು ವಾಹನಗಳು (ಅಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು) ಹೊರತುಪಡಿಸಿ ಉಳಿದ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ.
ಶಿರಾಡಿ ಘಾಟ್ ರಸ್ತೆಯಲ್ಲಿನ ದೋಣಿಗಾಲ್ ಬಳಿ ಮತ್ತೆ ಭೂಕುಸಿತವಾಗಿದ್ದು, ಹೆಚ್ಚಿನ ಅಪಾಯ ಸಂಭವಿಸುವುದನ್ನು ತಡೆಯವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ವಾರ ತಾಲೂಕಿನ ದೋಣಿಗಲ್ ಸಮೀಪ ಅಲ್ಪ ಪ್ರಮಾಣದಲ್ಲಿ ರಸ್ತೆ ಕುಸಿದಿತ್ತು. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಚಿವರು ಭೇಟಿ ನೀಡಿದ ನಾಲ್ಕನೇ ದಿನಕ್ಕೆ ಮತ್ತೆ ಭೂ ಕುಸಿತವಾಗಿದೆ.