ಅರಸೀಕೆರೆ(ಹಾಸನ): ಮೇಯಲು ಕಟ್ಟಿಹಾಕಿದ್ದ ಎಮ್ಮೆ ಕರುವೊಂದು ಪಕ್ಕದ ಜಮೀನಿಗೆ ಮೇಯಲು ಹೋಗಿದ್ದ ಕಾರಣಕ್ಕೆ ಜಮೀನಿನ ಮಾಲೀಕ ಆ ಕರುವನ್ನು ತೆಂಗಿನ ಮರಕ್ಕೆ ಕಟ್ಟಿ ಹಾಕಿ ಮನಸೋಯಿಚ್ಛೆ ಥಳಿಸಿ ಕೊಂದುಹಾಕಿರುವ ಆರೋಪ ಪ್ರಕರಣ ಹಾಸನ ಜಿಲ್ಲೆಯ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.
ಪ್ರಕರಣದ ವಿವರಣೆ: ಘಟನೆ ವಿವರ ಕಲ್ಪನಾ ಎಂಬುವವರು ಎಮ್ಮೆ ಕರುವನ್ನು ತಮ್ಮ ಜಮೀನಿನಲ್ಲಿ ಮೇಯಲು ಕಟ್ಟಿಹಾಕಿದ್ದರು. ಅಕಸ್ಮಾತ್ ಆ ಕರು ಹಗ್ಗ ಕಿತ್ತುಕೊಂಡು ಪಕ್ಕದ ಕುಮಾರಸ್ವಾಮಿ ಎಂಬುವವರ ಜಮೀನಿಗೆ ಹೋಗಿ ಮೇಯುತ್ತಿತ್ತು. ಇದನ್ನು ಕಂಡ ಕುಮಾರಸ್ವಾಮಿ ಆ ಎಮ್ಮೆ ಕರುವನ್ನು ತೆಂಗಿನಮರಕ್ಕೆ ಕಟ್ಟಿ ಹಾಕಿ ಮರದ ಕಟ್ಟಿಗೆಯಿಂದ ಮುಖದ ಭಾಗಕ್ಕೆ ಮತ್ತು ದೇಹದ ನಾನಾ ಭಾಗಗಳಿಗೆ ಮನಸೋಯಿಚ್ಛೆ ಕಟ್ಟಿಗೆಯಿಂದ ಬಲವಾಗಿ ಹೊಡೆದು ಕೊಂದು ಹಾಕಿದ್ದಾರೆ ಎಂದು ಎಮ್ಮೆ ಕರುವಿನ ಮಾಲೀಕರಾದ ಕಲ್ಪನಾ ಅವರ ಪುತ್ರಿ ತೇಜಸ್ವಿನಿ ಅವರು ಆರೋಪಿಸಿದ್ದಾರೆ. ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ತೇಜಸ್ವಿನಿ ಅವರು, ಈ ಹಿಂದೆಯೂ ನಮ್ಮ ಆಡಿನ ಮರಿಯನ್ನು ಹೊಡೆದು ಕುಮಾರಸ್ವಾಮಿ ಕೊಂದು ಹಾಕಿದ್ದರು. ಅಲ್ಲದೆ, ಟೊಮೆಟೊ ಹಣ್ಣಿನಲ್ಲಿ ವಿಷ ಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ನಾವು ಪೊಲೀಸರಿಗೆ ದೂರು ನೀಡಿದ್ದೆವು. ಆದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಡಿರಲಿಲ್ಲ ಎಂದು ತೇಜಸ್ವಿನಿ ಹೇಳಿದ್ದಾರೆ.
ತಮ್ಮ ವಿರುದ್ಧದ ಆರೋಪ ಕುರಿತು ಕುಮಾರಸ್ವಾಮಿ ಹೇಳಿದ್ದೇನು.. ತೇಜಸ್ವಿನಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಆರೋಪಿ ಕುಮಾರಸ್ವಾಮಿ ಅವರು, ಈ ಹಿಂದೆ ನಮ್ಮ ಜಮೀನಿಗೆ ನುಗ್ಗಿದ್ದಕ್ಕೆ ಆಡಿನ ಮರಿಗೆ ಕಲ್ಲು ತಗೊಂಡು ಹೊಡೆದಿದ್ದು ನಿಜ. ಆದ್ರೆ ಈ ಎಮ್ಮೆ ಕರು ಹೇಗೆ ಸಾವನ್ನಪ್ಪಿದೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತು ಜಾನುವಾರು ಮಾಲೀಕರಾದ ಕಲ್ಪನಾ ಅವರು ಗಂಡಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ.