ಹಾಸನ:ಜಮೀನಿಗೆ ತಂತಿ ಬೇಲಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.
ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಪಟ್ಟಣದ ಎಪಿಎಂಸಿ ನಿರ್ದೇಶಕ ನಾಗರಾಜ್ (49) ಮತ್ತು ರಾಯಾಪುರ ಗ್ರಾಮದ ವಸಂತಕುಮಾರ್(42) ಗಾಯಗೊಂಡಿದ್ದು, ಅವರನ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ :
ರಾಯಾಪುರ ಗ್ರಾಮದಲ್ಲಿ ಯಗಚಿ ಎಡದಂಡೆ ನಾಲೆ ಹಾದು ಹೋಗಿದ್ದು, ನಾಲೆಯ ಎರಡೂ ಬದಿಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ತಂತಿ ಬೇಲಿ ಅಳವಡಿಸಲಾಗಿದೆ. ಈ ಪೈಕಿ ನಾಗರಾಜ್ ಮತ್ತು ವಸಂತಕುಮಾರ್‌ಗೆ ಸೇರಿದ ಜಾಗವನ್ನು ಯಗಚಿ ಯೋಜನೆಗೆ ಪರಿಹಾರ ನೀಡಿ ವಶಪಡಿಸಿಕೊಳ್ಳಲಾಗಿದೆ.
ನಿಗಮದ ವತಿಯಿಂದ ಈ ಜಾಗಕ್ಕೆ ಅಧಿಕಾರಿಗಳು ಬೇಲಿ ಹಾಕಿದ್ದಾರೆ. ಅದರ ಜೊತೆಗೆ ಸಾರ್ವಜನಿಕರ ಅನುಕೂಲಕ್ಕೆ 10 ಅಡಿ ಜಾಗಕ್ಕೆ ಬೇಲಿ ಹಾಕದೆ ಹಾಗೆಯೇ ಬಿಡಲಾಗಿದೆ. ಈ ಜಾಗ ತಮಗೆ ಸೇರಿದ್ದು, ಇಲ್ಲಿಗೆ ತಂತಿ ಬೇಲಿ ಹಾಕಿಕೊಳ್ಳುತ್ತೇವೆ ಎಂದು ವಸಂತಕುಮಾರ್ ಮತ್ತು ನಾಗರಾಜ್ ನಡುವೆ ಮೊದಲಿನಿಂದಲೂ ಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ತೀರ್ಮಾನ ಮಾಡಲು ಶಾಸಕ ಕೆ.ಎಸ್.ಲಿಂಗೇಶ್ ತಾಲೂಕು ಪಂಚಾಯಿತಿಯ ತಮ್ಮ ಕಚೇರಿಗೆ ಕರೆಸಿದ್ದರು.
ಆದರೆ, ಅಲ್ಲಿ ಅವರಿಬ್ಬರೂ ಒಮ್ಮತಕ್ಕೆ ಬಾರದೆ ಮಾತಿನ ಚಕಮಕಿ ನಡೆಸಿದ್ದರಿಂದ ಅವರಿಬ್ಬರನ್ನೂ ಕಚೇರಿಯಿಂದ ಹೊರ ಕಳುಹಿಸಿದ್ದಾರೆ. ಈ ವೇಳೆ ಅವರಿಬ್ಬರ ಬೆಂಬಲಿಗರು ಮಾರಾಮಾರಿ ಮಾಡಿಕೊಂಡು ಇಬ್ಬರು ಆಸ್ಪತ್ರೆ ಸೇರಿದ್ದಾರೆ.
ಇನ್ನು ಈ ಸಂಬಂಧ ಇಬ್ಬರ ಮೇಲೆ ಕೂಡ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.