ಹಾಸನ: ಇಷ್ಟು ದಿನ ಏನ್ ಮಾಡ್ತಿದ್ರಿ, ಅನುದಾನವೆಲ್ಲಾ ಏನಾಯ್ತು? ಈಗ ಶೌಚಾಲಯವಿಲ್ಲ ಅಂತೀರಲ್ಲ. ವಾರದೊಳಗೆ ಶೌಚಾಲಯ ನಿರ್ಮಾಣವಾಗಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯನಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದಿನಿಂದ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಪುನಾರಂಭವಾದ ಹಿನ್ನೆಲೆ, ಸಚಿವರು ಜಿಲ್ಲೆಯ ಶಾಂತಿಗ್ರಾಮದ ಕಾಲೇಜಿಗೆ ಭೇಟಿ ನೀಡಿದ್ದರು. ಈ ವೇಳೆ, ಕಾಲೇಜಿನಲ್ಲಿ ಶೌಚಾಲಯವಿಲ್ಲ ಎಂದು ಸಚಿವರ ಗಮನಕ್ಕೆ ಬಂದಿದ್ದು, ಗ್ರಾಮ ಪಂಚಾಯಿತಿ ಸದಸ್ಯನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇಷ್ಟು ದಿನ ಏನು ಮಾಡುತ್ತಿದ್ರಿ, ಬಂದ ಅನುದಾನದಲ್ಲಿ ಯಾಕೆ ಶೌಚಾಲಯ ನಿರ್ಮಾಣ ಮಾಡಿಲ್ಲ. ಇದು ನಿಮ್ಮ ಜವಾಬ್ದಾರಿ ಅಲ್ವಾ? ನಿಮಗೆ ಕೊಡುವ ಅನುದಾನದಲ್ಲಿ ಮೊದಲು ಸರ್ಕಾರಿ ಕಾಲೇಜಿನಲ್ಲಿ ಶೌಚಾಲಯ ನಿರ್ಮಿಸಿ ಎಂದು ಸೂಚಿಸಿದರು.
ಈ ವೇಳೆ ಪ್ರಾಂಶುಪಾಲರು, ಕಾಲೇಜಿಗೆ ಅಂತಾ ಇರುವುದು ಎರಡೇ ಶೌಚಾಲಯ. ಒಂದು ಸಿಬ್ಬಂದಿಗೆ, ಮತ್ತೊಂದು ವಿದ್ಯಾರ್ಥಿನಿಯರಿಗೆ. ಬಾಲಕರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ ಎಂದರು. ಇದಕ್ಕೆ ಸಿಟ್ಟಾದ ಸಚಿವ, ಈ ಸಮಸ್ಯೆಯನ್ನು ಇಷ್ಟು ದಿನ ನನ್ನ ಗಮನಕ್ಕೆ ಯಾಕೆ ತಂದಿಲ್ಲ. ಶೌಚಾಲಯ ನಿರ್ಮಿಸಿಕೊಡಿ ಎಂದು ಯಾರಿಗೆ ಪತ್ರ ಬರೆದಿದ್ದೀರಿ ಎಂದು ಗುಡುಗಿದರು.