ಹಾಸನ:ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿದೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ಆರ್. ಗಿರೀಶ್ ಬಹಿರಂಗವಾಗಿ ತಿಳಿಸಿದ್ದಾರೆ.
ಹಾಸನದಲ್ಲಿಯೂ ಆಕ್ಸಿಜನ್ ಕೊರತೆ: ಜಿಲ್ಲಾಧಿಕಾರಿ - Hassan
ಹಾಸನಕ್ಕೆ ಪ್ರತಿದಿನ 650ಕ್ಕೂ ಅಧಿಕ ಆಕ್ಸಿಜನ್ ಸಿಲಿಂಡರ್ ಅವಶ್ಯಕತೆ ಇದೆ. ಇದೇ ರೀತಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಚಾಮರಾಜನಗರದ ಆಸ್ಪತ್ರೆಯಲ್ಲಿ ಆದ ದುರಂತ ನಮ್ಮಲ್ಲೂ ಸಂಭವಿಸಬಹುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಹಾಸಿಗೆಗಳು ಭರ್ತಿಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ವತಿಯಿಂದಲೇ ಚಿಕಿತ್ಸೆ ಪ್ರಾರಂಭಿಸಿದ್ದೇವೆ. ಹಿಮ್ಸ್ ಆಸ್ಪತ್ರೆಯಲ್ಲಿ ಲಭ್ಯವಿರುವ ಆಕ್ಸಿಜನ್ ಬಿಟ್ಟು ಜಿಲ್ಲೆಯಲ್ಲಿ 480 ಸಿಲಿಂಡರ್ ಮಾತ್ರ ಲಭ್ಯವಿದೆ. ಆದರೆ ಪ್ರತಿದಿನ 650ಕ್ಕೂ ಅಧಿಕ ಸಿಲಿಂಡರ್ ಹಾಸನಕ್ಕೆ ಅವಶ್ಯಕತೆ ಇದೆ. ಇದೇ ರೀತಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಚಾಮರಾಜನಗರದ ಆಸ್ಪತ್ರೆಯಲ್ಲಿ ಆದ ದುರಂತ ನಮ್ಮಲ್ಲೂ ಸಂಭವಿಸಬಹುದು ಎಂಬ ಮುನ್ಸೂಚನೆ ನೀಡಿದರು.
ಹಾಸನದಿಂದ ಚಿಕ್ಕಮಗಳೂರಿಗೆ ಆಕ್ಸಿಜನ್ ಪೂರೈಕೆ ನಿಲ್ಲಿಸಿದ್ದೇವೆ. ಕೋವಿಡ್ 2ನೇ ಅಲೆಯಲ್ಲಿ ರಾಜ್ಯದಲ್ಲಿಯೇ ನಮ್ಮ ಜಿಲ್ಲೆ 2ನೇ ಸ್ಥಾನದಲ್ಲಿದ್ದು ಆಮ್ಲಜನಕದ ಹಾಹಾಕಾರ ಎದ್ದು ಕಾಣುತ್ತಿದೆ. ಹಾಗಾಗಿ ಒಂದು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ರಾಜ್ಯ ಸರ್ಕಾರ ಯಾವ ರೀತಿ ನಿರ್ದೇಶನ ನೀಡುತ್ತದೆಯೋ ಆ ರೀತಿ ಕೆಲಸ ಮಾಡುತ್ತೇವೆ. ಅನಗತ್ಯವಾಗಿ ಆಕ್ಸಿಜನ್ ಕೊಡುವ ಹಾಗಿಲ್ಲ. ಯಾರಿಗೆ ಅತ್ಯವಶ್ಯಕವಾಗಿ ಆಕ್ಸಿಜನ್ ಬೇಕಾಗುತ್ತದೆ ಅಂಥವರಿಗೆ ಮಾತ್ರ ನೀಡಲಾಗುತ್ತದೆ. ಹಾಸನದಲ್ಲಿ ನಮಗೆ ಇರುವುದು ಒಂದೇ ಪ್ಲಾಂಟ್. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.