ಸಕಲೇಶಪುರ(ಹಾಸನ):ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಪರಿಸ್ಥಿತಿ ಉಂಟಾಗಿದ್ದರಿಂದ ಬಸ್‌ಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಕಳೆದೊಂದು ವಾರದಿಂದ ಜಿಲ್ಲಾ ಕೇಂದ್ರ ಹಾಸನಕ್ಕೆ ಮಾತ್ರ ಬಸ್ ಬಿಡಲಾಗುತ್ತಿತ್ತು. ಇದೀಗ ರಾಜ್ಯ ಸರ್ಕಾರ ಅಂತರ ಜಿಲ್ಲೆಗಳಿಗೆ ಬಸ್ ಸಂಚರಿಸಲು ಅನುಮತಿ ನೀಡಿದೆ. ಆದರೆ, ಕೊರೊನಾ ಭಯದಿಂದ ಬಸ್‌ನಲ್ಲಿ ಸಂಚರಿಸಲು ಪ್ರಯಾಣಿಕರು ಅಷ್ಟಾಗಿ ಬಾರದ ಕಾರಣ ಮೊದಲ ದಿನ ಬೆಂಗಳೂರಿಗೆ 2 ಬಸ್‌ಗಳಲ್ಲಿ ಸುಮಾರು 60 ಜನ ಮಾತ್ರ ಸಂಚರಿಸಿದರು. ಮೈಸೂರು ಹಾಗೂ ಮಂಗಳೂರಿಗೆ ಬಸ್ ಬಿಡಲು ಸ್ಥಳೀಯ ಆಡಳಿತ ಸಿದ್ಧಗೊಂಡಿದೆ. ಆದರೆ, ಪ್ರಯಾಣಿಕರು ಬರದಿದ್ದರಿಂದ ಅಂತಿಮವಾಗಿ ಈ ಬಸ್‌ಗಳನ್ನು ರದ್ದುಪಡಿಸಲಾಯಿತು.
ಬಸ್ ಓಡಿಸಿದರೂ ಬಾರದ ಪ್ರಯಾಣಿಕರು: ಕೆಎಸ್ಆರ್ಟಿಸಿಗೆ ನಷ್ಟ - ಕೆ.ಎಸ್.ಆರ್.ಟಿ.ಸಿಗೆ ನಷ್ಟ
ಲಾಕ್ಡೌನ್ ಸಡಿಲಿಕೆಯ ಆಧಾರದಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ ಬೇರೆ ಊರುಗಳಿಗೆ ಬಸ್‌ಗಳನ್ನು ಬಿಟ್ಟರೂ ಸಹ ಪ್ರಯಾಣಿಕರು ಬಾರದ ಕಾರಣ ಸಂಸ್ಥೆಯ ಸಿಬ್ಬಂದಿ ನಿರಾಶೆ ಅನುಭವಿಸಿದರು.
ಬೆಂಗಳೂರು ಹಾಗೂ ಹಾಸನದ ಕಡೆಯಿಂದ ಮಂಗಳೂರಿಗೆ ಹೋಗಲು ಕೆಲವು ಬಸ್‌ಗಳು ಬಂದಿದ್ದು, ಇದಕ್ಕೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಹತ್ತಿದರು. ಪ್ರತಿ ಬಸ್‌ಗಳಲ್ಲಿ 30 ಜನರನ್ನು ಮಾತ್ರ ಕರೆದೊಯ್ಯಲು ಅವಕಾಶವಿದೆ. ಇದರಿಂದ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುವಂತಾಗಿದೆ.
ಇದರ ಜೊತೆಗೆ ಸಂಜೆ 7 ಗಂಟೆಯ ನಂತರ ಬಸ್‌ಗಳು ಸಂಚರಿಸಲು ಅವಕಾಶವಿಲ್ಲದಿರುವುದರಿಂದ ಬಸ್‌ಗಳು ಮುಂಜಾನೆಯೇ ಡಿಪೋದಿಂದ ಹೊರಡಬೇಕಾಗಿದೆ. ಜಿಲ್ಲಾ ಕೇಂದ್ರ ಹಾಸನಕ್ಕೆ ಹೋಗಲು ಮಾತ್ರ ಕೆಲವೇ ಕೆಲವು ಜನರು ಬರುತ್ತಿದ್ದಾರೆ. ಬರುವ ಪ್ರಯಾಣಿಕರಿಗೆ ವೈದ್ಯಕೀಯ ಪರೀಕ್ಷೆ ಮಾಡಿ ಸ್ಯಾನಿಟೈಸರ್ ನೀಡಿ ಮಾಹಿತಿ ಪಡೆದು ಬಸ್‌ನಲ್ಲಿ ಸಂಚರಿಸುವ ಅವಕಾಶ ನೀಡಲಾಗುತ್ತಿದೆ.