ಹಾಸನ:ತಮ್ಮನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯ್ತು.
ಸಾರಿಗೆ ನೌಕರರ ನೋವುಗಳು ಸರ್ಕಾರಕ್ಕೆ ಅರ್ಥವಾಗ್ತಿಲ್ಲ ಅಂತಾ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ರು. ಹಬ್ಬ ಹರಿದಿನಗಳಲ್ಲಿ ತಮ್ಮ ಕುಟುಂಬದ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಬಂಧು-ಬಳಗದ ಯಾವ ಶುಭ ಸಮಾರಂಭಗಳಲ್ಲೂ ಪಾಲ್ಗೊಳ್ಳಲು ಸಾಧ್ಯವಾಗದೇ ಹಗಲು-ರಾತ್ರಿ ನಾಲ್ಕು ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು. ನಮ್ಮ ಸಾರಿಗೆ ಸಂಸ್ಥೆ ಇಡೀ ದೇಶದಲ್ಲಿಯೇ ಅತ್ಯುತ್ತಮ. ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಸರ್ಕಾರ ಮಾತ್ರ ತಮ್ಮ ಅಧೀನದ ಬೇರೆ ನಿಗಮ, ಇಲಾಖೆ ಹಾಗೂ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ಕೊಡಬೇಕಾದ ಸೌಲಭ್ಯ ಕೊಡುತ್ತಿದೆ. ಆದರೆ, ಸರ್ಕಾರದ ಅಣತಿಯಂತೆ ನಡೆಯುತ್ತಿರುವ ಸಾರಿಗೆ ನೌಕರರಿಗೆ ಮಾತ್ರ ಮಲತಾಯಿ ಧೋರಣೆ ಮಾಡುವ ಮೂಲಕ ಸಾರಿಗೆ ನೌಕರರ ಬಾಳನ್ನು ಅತ್ಯಂತ ಹೀನಾಯ ಸ್ಥಿತಿಗೆ ತಳ್ಳದೆ ಎಂದು ತಮ್ಮ ಅಳಲು ತೋಡಿಕೊಂಡರು.