ಹಾಸನ: ನಗರದ ಹೇಮಾವತಿ ಪ್ರತಿಮೆ ಮುಂಭಾಗ ವೀರಶೈವ ಲಿಂಗಾಯತ ಯುವ ಸೇನೆಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ವೀರಶೈವ ಲಿಂಗಾಯತ ಜಿಲ್ಲಾ ಮುಖಂಡ ಬಿ.ಆರ್ ಗುರುದೇವ್ರವರು, ಸಾಮಾಜಿಕವಾಗಿ, ರಾಜಕೀಯವಾಗಿ ಮಹಿಳೆಗೆ ಮುಕ್ತ ಅವಕಾಶವೇ ಇಲ್ಲದ ಕಾಲದಲ್ಲಿ ಪರಕೀಯರ ದಾಸ್ಯದ ವಿರುದ್ಧ ಸಿಡಿದೆದ್ದು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಅಧ್ಯಾಯ ಬರೆದು ದೇಶದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಗೆ ಕಿಚ್ಚು ಹೊತ್ತಿಸಿದ ಪ್ರಥಮ ಮಹಿಳಾ ಹೋರಾಟಗಾರ್ತಿ ವೀರರಾಣಿ ಚೆನ್ನಮ್ಮನವರು ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕ್ರಿ.ಶ. 1775 ಅಕ್ಟೋಬರ್ 23ರಂದು ತಂದೆ ಧೂಳಪ್ಪಾ ದೇಸಾಯಿ ಮತ್ತು ತಾಯಿ ಪದ್ಮಾವತಿಯ ಮಗಳಾಗಿ ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ ಜನಿಸಿದರು. ಅನೇಕ ಯುದ್ದ ಕಲೆ ಹಾಗೂ ಭಾಷಾ ಪಾಂಡಿತ್ಯದಲ್ಲಿ ಪರಿಣಿತಿ ಪಡೆದಿದ್ದರು. ಕಿತ್ತೂರಿನ ಮಲ್ಲಸರ್ಜ ದೇಸಾಯಿಯನ್ನು ಮದುವೆಯಾದ ಚೆನ್ನಮ್ಮ ಗಂಡನ ಅಕಾಲಿಕ ನಿಧನದ ನಂತರ ಸಂಸ್ಥಾನದ ರಾಜ್ಯ ಭಾರವನ್ನು ತನ್ನ ಹೆಗಲ ಮೇಲೆ ತೆಗೆದುಕೊಂಡು ನಾಡ ರಕ್ಷಣೆಗಾಗಿ ಹೋರಾಟ ನಡೆಸಿದ ದಿಟ್ಟ ಮಹಿಳೆ ಚೆನ್ನಮ್ಮ.
ಕಿತ್ತೂರು ಎಂಬ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಯ ಸಲುವಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಅಮರಳಾದ ಚೆನ್ನಮ್ಮ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಮಾದರಿ ಎಂದರು. ಈ ವೇಳೆ ಹೋರಾಟಗಾರ್ತಿ ವೀರರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.