ಹೊಳೆನರಸೀಪುರ(ಹಾಸನ): ಬೆಂಗಳೂರಿನ ಕೆ.ಜಿ ಹಳ್ಳಿಯನ ಗಲಭೆ ಒಂದು ಪೂರ್ವಯೋಜಿತವಾಗಿದ್ದು, ಈಗಾಗಲೇ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪೊಲೀಸ್ ಇಲಾಖೆಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಆದೇಶ ಮಾಡಿದ್ದಾರೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು.
ಕೆ.ಜಿ ಹಳ್ಳಿ ಗಲಭೆ ಪ್ರಕರಣ ಪೂರ್ವನಿಯೋಜಿತ: ಸಚಿವ ಗೋಪಾಲಯ್ಯ - KG Halli Rio'
ನಿನ್ನೆ ರಾತ್ರಿ ಕೆಜಿಹಳ್ಳಿಯಲ್ಲಿ ನಡೆದ ಗಲಭೆ ಕುರಿತಂತೆ ಸಚಿವ ಗೋಪಾಲಯ್ಯ ಪ್ರತಿಕ್ರಯಿಸಿದ್ದು, ಇದೊಂದು ಪೂರ್ವನಿಯೋಜಿತ ಗಲಭೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಸರ್ಕಾರ ಕೈಗೊಳ್ಳಲಿದೆ ಎಂದಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಪುರಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19 ಮತ್ತು ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಬಿಜೆಪಿ ಸರ್ಕಾರ ಬಂದ ಬಳಿಕ ಇಂತಹ ಪ್ರಕರಣ ಮೊದಲ ಬಾರಿಗೆ ಜರುಗಿದೆ. ಈ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನನ್ನ ಬಳಿ ಇಲ್ಲ. ನಾನು ಬೆಂಗಳೂರಿಗೆ ಹೋದ ನಂತರ ವಿಚಾರ ತಿಳಿದು ಮಾತನಾಡುತ್ತೇನೆ. ಗಲಭೆ ಬಗ್ಗೆ ನಿಖರ ಕಾರಣ ನನಗೆ ಗೊತ್ತಿಲ್ಲ. ಇದು ಪೂರ್ವನಿಯೋಜಿತ ಎಂಬುದು ಮಾತ್ರ ಸ್ಪಷ್ಟ ಎಂದು ಗೋಪಾಲಯ್ಯ ಹೇಳಿದರು.
ಹಾಸನದಲ್ಲಿಯೂ ಕೂಡ ಪುಡಿರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಕ್ಕೆ ಈಗಾಗಲೇ ನಾನು ಪೊಲೀಸ್ ಇಲಾಖೆಗೆ ಸ್ಪಷ್ಟ ಆದೇಶ ನೀಡಿದ್ದೇನೆ. ಕ್ಷುಲ್ಲಕ ಕಾರಣಗಳಿಗೆ ಚೂರಿ ಇರಿತ ಮತ್ತು ಕೊಲೆ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಸ್ಪಿ ಹಾಗೂ ಡಿಸಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.