ಹಾಸನ:ಕೋವಿಡ್ ಬಿಕ್ಕಟ್ಟು ಹಿನ್ನೆಲೆ ಈ ಬಾರಿ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿದೆ. ಆದರೆ ಗಣ್ಯವ್ಯಕ್ತಿಗಳಿಗೆ ಅವರ ಕುಟುಂಬದವರಿಗೆ ಅವಕಾಶ ನೀಡಿರುವುದರಿಂದ ಭಕ್ತರು ಅಸಮಾಧಾನಗೊಂಡಿದ್ದಾರೆ.
ಈಗಾಗಲೇ ಎರಡು ಮೂರು ಬಾರಿ ಮಾಜಿ ಸಚಿವ ರೇವಣ್ಣ ಜಿಲ್ಲಾಡಳಿತದ ವಿರುದ್ಧ ಗುಡುಗಿದ್ರು. ಬಳಿಕ ಜನಪ್ರತಿನಿಧಿಗಳಿಗೆ ನಿತ್ಯ 100 ಮಂದಿಯಂತೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸಾರ್ವಜನಿಕರಿಗೆ ಮತ್ತು ಭಕ್ತರಿಗೆ ಬೇಸರವಾಗಿತ್ತು. ಹೀಗಾಗಿ ಇದೀಗ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಕೇವಲ ಜನಪ್ರತಿನಿಧಿಗೆ ಮಾತ್ರ ಅವಕಾಶ ಕೊಟ್ಟು, ಸಾರ್ವಜನಿಕ ದರ್ಶನಕ್ಕೆ ನಿಷೇಧ ಹೇರಿರುವ ಹಿನ್ನೆಲೆ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ದೇವಸ್ಥಾನದ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹಾಸನಾಂಬೆ ಎಂದರೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿಲ್ಲ. ಬಡವರಿಗೂ ಕೂಡ ದರ್ಶನ ನೀಡಬೇಕು. ಜನಪ್ರತಿನಿಧಿಗಳಿಗೆ ಮತ್ತು ಗಣ್ಯರಿಗೆ ಅವಕಾಶ ಮಾಡಿಕೊಟ್ಟರೆ ಎಷ್ಟು ಸರಿ. ಕೋವಿಡ್-19 ಎಂಬ ನೆಪವನ್ನೊಡ್ಡಿ ತಮಗೆ ಬೇಕಾದವರಿಗೆ ಮಾತ್ರ ಅವಕಾಶ ಮಾಡಿಕೊಡುವುದು ಇದು ಇಬ್ಬಗೆ ನೀತಿ ಆಗುತ್ತದೆ. ಅಂತಹ ಕೆಲಸವನ್ನ ಜಿಲ್ಲಾಡಳಿತ ಮಾಡಬಾರದು. ದರ್ಶನಕ್ಕೆ ಅವಕಾಶ ಕೊಡುವುದಾದರೆ ಎಲ್ಲರಿಗೂ ಅವಕಾಶ ಕೊಡಿ ಇಲ್ಲವಾದರೆ ಯಾರಿಗೂ ಕೂಡ ಅವಕಾಶ ಕೊಡುವುದು ಬೇಡ ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್. ಗಿರೀಶ್ ಪ್ರತಿವರ್ಷ 5ರಿಂದ 6 ಲಕ್ಷ ಮಂದಿ ದರ್ಶನ ಪಡೆಯುತ್ತಿದ್ದರು. ಅಂದರೆ ನಿತ್ಯ 50 ಸಾವಿರಕ್ಕೂ ಅಧಿಕ ದರ್ಶನ ಪಡೆಯುವುದರಿಂದ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವುದಾಗಿ ಎಂದು ಭರವಸೆ ನೀಡಿದರು. ಹಾಸನಾಂಬೆ ದರ್ಶನ ಪ್ರಾರಂಭವಾಗಿ ಇಂದಿಗೆ ಮೂರು ದಿನಗಳು ಕಳೆದಿದ್ದು, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಸೇರಿದಂತೆ ಜನಪ್ರತಿನಿಧಿಗಳು ತಮ್ಮ ಕುಟುಂಬ ಸಮೇತ ದರ್ಶನ ಪಡೆಯುತ್ತಿದ್ದಾರೆ. ತಮಗೂ ದರ್ಶನ ಮಾಡುವಂತೆ ಅವಕಾಶ ಕಲ್ಪಿಸಬೇಕೆಂದು ವಿವಿಧ ಸಂಘಟನೆಗಳು ನಿತ್ಯ ಒತ್ತಡ ಹೇರುತ್ತಿದ್ದಾರೆ.