ಹಾಸನ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಪ್ರಯತ್ನಗಳು ನಡೆಯುತ್ತಲೇ ಇವೆ. ಇಲ್ಲೊಂದು ಸರ್ಕಾರಿ ಶಾಲೆ ರೈಲು ಬೋಗಿಯ ಮಾದರಿಯಲ್ಲಿ ಪರಿವರ್ತನೆಗೊಂಡಿದ್ದು, ಮಕ್ಕಳನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಹೌದು, ಜಿಲ್ಲೆಯ ಅರಸೀಕೆರೆ ಪಟ್ಟಣದ ಹೊರವಲಯದ ಕಾಳನಕೊಪ್ಪಲು ಶಾಲೆಯನ್ನು ರೈಲು ಬೋಗಿ ಮಾದರಿಯಲ್ಲಿ ವಿಶೇಷವಾಗಿ ರೂಪಿಸಲಾಗಿದೆ. ಕೊರೊನಾ ನಂತರದಲ್ಲಿ ನಿರ್ಮಾಣವಾಗಿರುವ ಈ ಶಾಲೆ, ಮಕ್ಕಳ ಆಕರ್ಷಣೀಯ ರೈಲು ಮಾದರಿ ಶಾಲಾ ಕೊಠಡಿ ಎಂದ್ರೆ ತಪ್ಪಾಗಲಾರದು.
ಮಕ್ಕಳನ್ನು ಆಕರ್ಷಿಸುತ್ತಿರುವ ಸರ್ಕಾರಿ ಶಾಲೆ ಆಕರ್ಷಿತ ರೈಲು ಮಾದರಿ:
ಶಾಲೆಯ ಮುಂಭಾಗದ ರಸ್ತೆಯ ಎರಡು ಬದಿಯಲ್ಲಿ ಹಾದು ಹೋಗುವವರು ಒಮ್ಮೆಯಾದ್ರು ಶಾಲೆಯತ್ತ ಕಣ್ಣು ಹಾಯಿಸುತ್ತಾರೆ. ಅರಸೀಕೆರೆಯ ಜಂಕ್ಷನ್ನಲ್ಲಿ ನಿಲ್ಲಬೇಕಾದ ರೈಲು ಇಲ್ಲಿಗೆ ಬಂದು ಬಿಟ್ಟಿತ್ತಾ ಎನ್ನುವಷ್ಟು ಸುಂದರವಾಗಿ ಶಾಲೆಯ ಗೋಡೆ ಮೇಲೆ ರೈಲಿನ ಮಾದರಿ ಚಿತ್ರ ಬಿಡಿಸಿದ್ದಾರೆ. ಶಾಲೆಯ ಶಿಕ್ಷಕ ವೃಂದ ರೈಲಿನ ಮುಂಭಾಗ ಚಿಣ್ಣರ ಎಕ್ಸ್ಪ್ರೆಸ್ ಎಂದು ಬರೆದರೆ, ಬೋಗಿಗಳ ಮೇಲೆ ಕಾಳನಕೊಪ್ಪಲು-ಜಾಜೂರು ಕ್ಲಸ್ಟರ್, ನಲಿ-ಕಲಿ, ತರಗತಿಗಳ ಹೆಸರು ಬರೆಯುವ ಮೂಲಕ ಮಕ್ಕಳ ಗಮನವನ್ನು ಶಾಲೆಯತ್ತ ಕೇಂದ್ರಿಕರಿಸುವಂತೆ ಮಾಡಲಾಗಿದೆ.
ಶಾಲೆಯ ಮುಖ್ಯ ಶಿಕ್ಷಕ ಮಲ್ಲೇಶ್ ಅವರ ಕಲ್ಪನೆಯಲ್ಲಿ ಈ ಚಿತ್ರಗಳು ಮೂಡಿಬಂದಿವೆ. ಕೆಲವು ಕಡೆ ಗೋಡೆ ಮೇಲೆ ಪುಟಾಣಿ ಮಕ್ಕಳ ಬೊಂಬೆಗಳು, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಬಿಡಿಸಲಾಗಿದೆ.
ನಮ್ಮ ಶಾಲೆಗೆ ಮಕ್ಕಳು ಹೆಚ್ಚು ಆಕರ್ಷಿತವಾಗಬೇಕು ಎಂದು ತೀರ್ಮಾನಿಸಿ ಶಾಲೆಯ ಶಿಕ್ಷಕರೊಂದಿಗೆ ಚರ್ಚೆ ನಡೆಸಿ, ಕೊರೊನಾ ಸಂದರ್ಭದಲ್ಲಿ ಈ ಕೆಲಸ ಮಾಡಿದ್ದೇವೆ. ಸರ್ಕಾರದಿಂದ ಸಂಬಳ ಪಡೆದ ನಾವುಗಳು ಶಾಲೆಗೆ ಏನಾದರೂ ಕೊಡಬೇಕು ಎಂದು ಒಮ್ಮತದ ಮನಸ್ಸು ಮಾಡಿ ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಹಣ ವಿನಿಯೋಗಿಸಿ ಈ ರೀತಿ ಮಾಡಿದ್ದೇವೆ. ಈ ವರ್ಷ ಕೊರೊನಾ ಬಳಿಕ 30 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದು, ಮುಂದಿನ ವರ್ಷ 100 ಕ್ಕಿಂತ ಅಧಿಕ ಮಕ್ಕಳಿಗೆ ದಾಖಲಾತಿ ನೀಡುವ ಆಶಯವಿದೆ ಎಂದು ಮುಖ್ಯ ಶಿಕ್ಷಕ ಮಲ್ಲೇಶ್ ತಿಳಿಸಿದ್ದಾರೆ.
ಮುಖ್ಯ ಶಿಕ್ಷಕರಿಗೆ ಸನ್ಮಾನ:
ಶಾಲೆಯ ಮುಖ್ಯ ಶಿಕ್ಷಕರ ಶ್ರಮದಿಂದ ಈ ಶಾಲೆ ಇಂದು ನಮ್ಮ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಇಂತಹ ಕಲಾಕೃತಿಯೊಂದಿಗೆ ಎಲ್ಲರ ಕಣ್ಮನ ಸೆಳೆಯುತ್ತಿದೆ. ಶಾಲೆ ಆರಂಭಕ್ಕೂ ಮುನ್ನ ಸ್ವಯಂ ಪ್ರೇರಿತವಾಗಿ ಶಾಲೆಯ ಶಿಕ್ಷಕರುಗಳು ಸ್ವತಃ ಹಣ ವಿನಿಯೋಗಿಸಿ ಶಾಲೆಯನ್ನು ಅಭಿವೃದ್ಧಿ ಪಡಿಸಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಕಾರ್ಯದಲ್ಲಿ ಭಾಗಿಯಾದ ಶಾಲೆಯ ಎಲ್ಲಾ ಶಿಕ್ಷಕರ ಪರವಾಗಿ ಮುಖ್ಯ ಶಿಕ್ಷಕರಿಗೆ ಶಿಕ್ಷಕರ ದಿನದಂದು ಸನ್ಮಾನ ಕಾರ್ಯಕ್ರಮ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಒಬ್ಬ ಶಿಕ್ಷಕ ಮನಸ್ಸು ಮಾಡಿದ್ರೆ ದೇಶವನ್ನೇ ಬದಲಾಯಿಸಬಹುದು ಎಂಬುದಕ್ಕೆ ಮಲ್ಲೇಶ್ ಮತ್ತು ಶಾಲೆಯ ಸಹ ಶಿಕ್ಷಕರುಗಳೇ ಸಾಕ್ಷಿಯಾಗಿದ್ದಾರೆ. ಸರ್ಕಾರಿ ಶಾಲೆಗಳನ್ನು ಈ ರೀತಿ ಅಭಿವೃದ್ಧಿಪಡಿಸಿದ್ರೆ ಹೆಚ್ಚೆಚ್ಚು ವಿದ್ಯಾರ್ಥಿಗಳು ದಾಖಲಾಗುತ್ತಾರೆ. ಮತ್ತು ಸರ್ಕಾರಿ ಶಾಲೆಗಳ ಉಳಿವಿಗೆ ಸಹಕಾರಿಯಾಗಲಿದೆ.