ಹಾಸನ:ನಾನು ನನ್ ಪಕ್ಷದ ಬಗ್ಗೆ ಅಷ್ಟೇ ಮಾತಾಡಿದೆ. ಅವನ ಬಗ್ಗೆ ನಾನೇನು ಮಾತಾಡಿಲ್ವಲ್ಲ. ಯಾವನ್ರೀ ಇವನು ಯಾವೂರು ದಾಸಯ್ಯ. ಅಂತ ಏಕವಚನದಲ್ಲಿಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅಬ್ಬರಿಸಿದರು.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರ ವಿರುದ್ಧ ಸ್ವಲ್ಪ ಖಾರವಾಗಿಯೇ ಮಾತನಾಡಿದರು. ವಿಶ್ವ ನಾಯಕನ ಹೆಸರನ್ನು ಏಕವಚನದಲ್ಲಿ ಮಾತನಾಡುವಂತಹ ವ್ಯಕ್ತಿಯ ಹೆಸರನ್ನು ನನ್ನ ಬಾಯಲ್ಲಿ ಹೇಳಿದ್ರೆ ನನ್ನ ಬಾಯಿಗೇ ಹುಳ ಬೀಳುತ್ತೆ. ಐದು ವರ್ಷ ಸಾಧನೆ ಮಾಡಿದರೆ ಯಾಕೆ ಚಾಮುಂಡೇಶ್ವರಿಯಲ್ಲಿ ಸೋಲ್ತಿದ್ರಿ. ಯಾಕೆ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುತ್ತಿದ್ರಿ. ನೀವು ಒಳ್ಳೆ ಕೆಲಸ ಮಾಡಿದ್ರೆ ನಿಮ್ಮ ಪಕ್ಷ ನಿರ್ನಾಮ ಆಗ್ತಿರ್ಲಿಲ್ಲ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ಮೂಲೆಗುಂಪಾಗಿದೆ : ನಮ್ಮ ಹೆಸರನ್ನು ಬಿಂಬಿಸಿದ್ರೆ ಜನ ವೋಟ್ ಹಾಕ್ತಾರೆ ಅಂತ ನಾ? ಭಾರತ್ ಜೋಡೋ ಅಂದ್ರೆ ರಾಹುಲ್ ಗಾಂಧಿ ಭಾರತ ಕಟ್ಟೋದಲ್ಲ, ಅವರ ಪಕ್ಷದ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ಒಂದು ಮಾಡುವಂತಹ ಯಾತ್ರೆ ಅದು. ಇಷ್ಟು ವರ್ಷಗಳ ಕಾಲ ದಲಿತರನ್ನು ಮೂಲೆಗುಂಪು ಮಾಡಿದ್ರಲ್ಲ. ಅದರ ತಪ್ಪಿಗಾಗಿ ಇವತ್ತು ಕಾಂಗ್ರೆಸ್ ಮೂಲೆಗುಂಪಾಗಿದೆ ಎಂದರು.
ಭಾರತ್ ಜೋಡೋ ಯಾತ್ರೆ ಮಾಡಿದರೆ ನಮಗೆ ಸರ್ಕಾರ ಬರುತ್ತೆ ಅಂತ ಭ್ರಮೆಯಲ್ಲಿದ್ದಾರೆ. ಭಾರತವನ್ನು ಹಿಂದೆ ತುಂಡು ಮಾಡಿದ್ಯಾರು?. ಇವತ್ತು ಭಾರತವನ್ನು ಜೋಡಿಸಬೇಕು ಅಂತ ಹೊರಟಿದ್ದಾರೆ. ಇದು ಸಾಧ್ಯನಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಇವತ್ತು ಎಷ್ಟರಮಟ್ಟಿಗೆ ಜಾತಿವಾದಿ ಆಗಿದೆ ಎಂದರೆ ಸಿದ್ದರಾಮಯ್ಯ ಅಹಿಂದ ಅವರಿಗೆ ಮಾತ್ರ ಬೆಂಬಲ ಕೊಟ್ಟರೆ ಡಿಕೆಶಿ ಅವರು ಒಕ್ಕಲಿಗ ಸಮುದಾಯ ಒಂದಾಗಬೇಕು ಅಂತಾರೆ.