ಹಾಸನ: ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿಯವರು, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮತ್ತು ಶಾಸಕ ಪ್ರೀತಮ್ ಜೆ. ಗೌಡರವರು ಸಂಜೆ ನಗರದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪುನಿತರಾದರು.
ಮೊದಲು ಹಾಸನಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದರ್ಬಾರ್ ಗಣಪತಿ ದೇವಸ್ಥಾನ ಹಾಗೂ ಶ್ರಿ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಇದಾದ ಬಳಿಕ ಜಿಲ್ಲಾಡಳಿತದಿಂದ ಸನ್ಮಾನಿಸಿದರು.
ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ ಕೆ. ಗೋಪಾಲಯ್ಯ ಮತ್ತು ಪ್ರೀತಮ್ ಜೆ. ಗೌಡ ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿಯವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷ ಸಾರ್ವಜನಿಕರು ಹಾಸನಾಂಬೆ ದೇವಿ ದರ್ಶನ ಪೆಡಯುತ್ತಿದ್ದರು. ಆದರೇ ಈ ವರ್ಷ ಕೊರೊನಾ ಆವರಿಸಿರುವುದರಿಂದ ಜೊತೆಗೆ ಜಿಲ್ಲಾಡಳಿತವು ಕೂಡ ನಿರ್ಬಂಧ ಏರಿರುವುದರಿಂದ ಭಕ್ತರುಗಳಿಗೆ ಅವಕಾಶ ಇರುವುದಿಲ್ಲ. ನೇರ ದರ್ಶನದಿಂದ ಭಕ್ತರು ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆದಷ್ಟು ಬೇಗ ಕೊರೊನಾ ಜಗತ್ತಿನಿಂದ ಇಲ್ಲದಾಗಿ ಮುಕ್ತವಾಗಲಿ ಎಂದು ಪ್ರಾರ್ಥಿಸಲಾಗಿದೆ. ಈ ಜಗತ್ತು ತ್ರಿಗುಣಗಳಿಂದ ಕೂಡಿ ಮಾಯ ರೂಪದಿಂದ ಇರುವ ಜಗತ್ತಿನಲ್ಲಿ ನವಬಂಧನದಲ್ಲಿ ಸಿಲುಕಿರುವ ಮನುಷ್ಯನಿಗೆ ಜ್ಞಾನದ ಮೂಲಕ ಮುಕ್ತಿ ಪಡೆಯಲು ಸಾಧ್ಯತೆ ಇದೆ. ಪಂಚಕೋಶಗಳಿಂದ ಕೋಡಿರುವ ದೇಹಗಳಲಿ ಜ್ಞಾನವನ್ನು ಮಾಡಿ ಬದ್ಧನಾಗಿರುವ ಮೂಲಕ ಜೀವನ ಪಾವನ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ಭಕ್ತರಿಗೆ ಹಾಸನಾಂಬೆದೇವಿ ದರ್ಶನ ಮಾಡಲು ಕೊನೆಯ ದಿವಸ ಬಿಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಮಾಡಿ ತೀರ್ಮಾನಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಷ್ಟು ದಿವಸ ಶಾಂತ ರೀತಿ ಜನತೆ ಸಹಕಾರ ಕೊಟ್ಟಿದ್ದಾರೆ. ತಾಯಿ ಕೃಪೆಯಿಂದ ಆದಷ್ಟು ಬೇಗ ಕೊರೊನಾದಿಂದ ದೂರ ಮಾಡಿ ಜನತೆ ಸುರಕ್ಷತೆಯಿಂದ ಇರಬೇಕು ಎಂದು ಮತ್ತೊಮ್ಮೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು. ಮುಖ್ಯಮಂತ್ರಿಗಳು ಹಾಸನಾಂಬೆ ದೇವಸ್ಥಾನಕ್ಕೆ ಬರುವಂತೆ ಪ್ರಾರಂಭದಲ್ಲೆ ಕೇಳಿದ್ದೆವು. ಬಾಗಿಲು ಹಾಕುವ ದಿವಸ ಬರುವಂತೆ ಮತ್ತೊಮ್ಮೆ ಕೇಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಉಪವಿಭಾಗಧೀಕಾರಿ ಜಗದೀಶ್ ಇತರರು ಪಾಲ್ಗೊಂಡಿದ್ದರು.