ಹಾಸನ: ಕಾಂಗ್ರೆಸ್ ಬಂದ 24ಗಂಟೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದಿದ್ದರು. ಈಗ ಜುಲೈ ಮತ್ತು ಆಗಸ್ಟ್ನಲ್ಲಿ ಪ್ರಾರಂಭ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಾವಾಗ ಪ್ರಾರಂಭವಾಗುತ್ತವೆ ಈ ಐದು ಯೋಜನೆಗಳು ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಗಾಗಿ ಅರ್ಜಿ ಹಾಕಲು ಹೋದರೆ ಸೇವಾ ಸಿಂಧು ಸರ್ವರ್ ಡೌನ್ ಎಂದು ಬರುತ್ತಿದೆ. ಎಷ್ಟೋ ಕಡೆ ಸಮಸ್ಯೆಯಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈಗಾಗಲೇ ರಾಜ್ಯ ಸರ್ಕಾರ ಆಯಾ ಸಚಿವರಿಗೆ ಮುಂದಿನ ಒಂದೂವರೆ ವರ್ಷ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಸಿಗುವುದಿಲ್ಲ ಎಂದು ತಾಕೀತು ಮಾಡಿದ್ದಾರೆ. ಅಂದಮೇಲೆ ಮುಂದಿನ ರಾಜ್ಯ ಬಜೆಟ್ ಯಾವ ರೀತಿ ಇರಲಿದೆ ಎನ್ನುವುದನ್ನು ನೀವು ಊಹಿಸಬಹುದು. ಮುಂದಿನ ಬಜೆಟ್ ನಲ್ಲಿ ಬೆಲೆ ಏರಿಕೆ ಸೇರಿದಂತೆ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳು ಜಾರಿಯಾಗುವ ನಿರೀಕ್ಷೆ ಸಾಧ್ಯವಿಲ್ಲ. ಚುನಾವಣಾ ಪೂರ್ವ ಕಾಂಗ್ರೆಸ್ ಪಕ್ಷದವರು ರಾಜ್ಯದ ಜನರಿಗೆ ನೀಡಿದ ಆಶ್ವಾಸನೆಯ 5 ಗ್ಯಾರಂಟಿಗಳನ್ನು ಈಡೇರಿಸಲು ಹೆಣಗಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಬಂಡವಾಳ ಜುಲೈ 7ರ ಬಜೆಟ್ನಲ್ಲಿ ಬಯಲಾಗಲಿದೆ ಎಂದರು.
ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಯಾರು ಕೊಟ್ಟಿದ್ದಾರೋ ಅವರೇ ಈಡೇರಿಸಬೇಕು. ಭರವಸೆ ಕಾಂಗ್ರೆಸ್ ಪಕ್ಷ ಕೊಟ್ಟು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಬಾರದು. ಈಗಾಗಲೇ ಕೇಂದ್ರ ಸರ್ಕಾರವು 5 ಕೆಜಿ ಅಕ್ಕಿ ಕೊಡುತ್ತಿದೆ. ಕಾಂಗ್ರೆಸ್ ಪಕ್ಷ ಕೊಟ್ಟಂತ ಭರವಸೆ ಪ್ರಕಾರ 10 ಕೆಜಿ ಅಕ್ಕಿ ಕೊಡಬೇಕು. ಐದು ಗ್ಯಾರಂಟಿಗಳನ್ನು ಕೊಡದೆ ಹೋದರೆ ಸರ್ಕಾರದ ವಿರುದ್ಧ ಜೆಡಿಎಸ್ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ರವಾನಿಸಿದರು.