ಸಕಲೇಶಪುರ: ಕೋವಿಡ್-19 ಪ್ರಕರಣಗಳು ಕಡಿಮೆಯಾಗುವವರೆಗೂ ಸ್ವಯಂ ಪ್ರೇರಿತ ಮಧ್ಯಾಹ್ನದ ಲಾಕ್ಡೌನ್ ಮುಂದುವರೆಯುತ್ತದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.
ಹಾಸನ ಜಿಲ್ಲೆಯ ಗಡಿ ಭಾಗಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಿ: ಸರ್ಕಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರ ಒತ್ತಾಯ ತಾಲ್ಲೂಕಿನಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿ ಸೋಮವಾರ ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಸರ್ಕಾರ ಹೊರ ರಾಜ್ಯದವರನ್ನು ನಮ್ಮ ರಾಜ್ಯಗಳಿಗೆ ಬಿಟ್ಟುಕೊಂಡಾಗಲೇ ಕೊರೊನಾ ಪ್ರಮಾಣ ಹೆಚ್ಚಾಗಿದೆ. ಸರ್ಕಾರ ಕೂಡಲೇ ಹೊರಜಿಲ್ಲೆಗಳಿಂದ ನಮ್ಮ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರು ಹಾಗೂ ಜನರನ್ನು ಜಿಲ್ಲೆಯ ಗಡಿಭಾಗದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ಪ್ರವೇಶ ನೀಡಬೇಕು. ಸರ್ಕಾರ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಮನೆಗಳಿಗೂ ಕನಿಷ್ಠ ಮೂರರಿಂದ ನಾಲ್ಕು ಮಾಸ್ಕ್ಗಳನ್ನು ಉಚಿತವಾಗಿ ಹಂಚಿಕೆ ಮಾಡಬೇಕು. ಈ ಮೊದಲು ಶಾಸಕರ ಅನುದಾನದಲ್ಲೇ ಮಾಸ್ಕ್ ಹಂಚಿಕೆ ಮಾಡಲು ಆದೇಶ ಇತ್ತು. ಆದರೆ ಸರ್ಕಾರ ಆ ಆದೇಶವನ್ನು ಹಿಂಪಡೆದಿದೆ. ಇದರಿಂದ ನಾವು ಅಸಹಾಯಕರಾಗಿದ್ದೇವೆ. ಆದ್ದರಿಂದ ಸರ್ಕಾರ ಕಡ್ಡಾಯವಾಗಿ ಮಾಸ್ಕ್ ವಿತರಣೆ ಮಾಡಬೇಕು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆ ಅನುದಾನದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಮಾಸ್ಕ್ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.
ತಾಲ್ಲೂಕಿನ ಜನತೆ ಮೊದಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸರ್ಕಾರವೇ ಅಸಹಾಯಕವಾಗಿ ಮಂತ್ರಿಗಳೇ ಭಗವಂತನ ಮೊರೆ ಹೋಗಿದ್ದಾರೆ. ನಾವು ಸರ್ಕಾರದ ಮೇಲೆ ನಂಬಿಕೆ ಇಡುವ ಹಾಗೆ ಇಲ್ಲ. ಹೀಗಿರುವಾಗ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಸಾರ್ವಜನಿಕರು ಮಾಸ್ಕ್ನ್ನು ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಳೆದ ಒಂದು ವಾರದ ಹಿಂದೆ ನಾವು ಅಧಿಕಾರಿಗಳು ವರ್ತಕರು ಸೇರಿದಂತೆ ಎಲ್ಲರ ಸಭೆಯನ್ನು ಕರೆದು ಸ್ವಯಂಪ್ರೇರಿತವಾಗಿ ಲಾಕ್ಡೌನ್ ಮಾಡಲು ತೀರ್ಮಾನಿಸಲಾಗಿದ್ದು, ಇದರಲ್ಲಿ ಮದ್ಯದಂಗಡಿಯ ಮಾಲೀಕರು ಕೂಡ ಸೇರಿದ್ದರು. ಇತರ ಎಲ್ಲಾ ವರ್ತಕರು ಲಾಕ್ಡೌನ್ಗೆ ಸಹಕಾರ ನೀಡಿದ್ದು, ಮದ್ಯದಂಗಡಿಯ ಅಂಗಡಿಗಳು ತೆರೆದಿರುವುದು ಸಮಂಜಸವಲ್ಲ. ಆದ್ದರಿಂದ ಮದ್ಯದಂಗಡಿ ಮಾಲೀಕರು ಸಹಕಾರ ನೀಡಬೇಕು. ಇಲ್ಲದೇ ಹೋದಲ್ಲಿ ನಮ್ಮ ಅಧಿಕಾರಿಗಳ ತಂಡ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಮಂಜುನಾಥ್, ಡಿವೈಎಸ್ಪಿ ಬಿ.ಆರ್ ಗೋಪಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ತಾಲೂಕು ವೈದ್ಯಾಧಿಕಾರಿ ಮಹೇಶ್ ಇನ್ನಿತರರು ಇದ್ದರು.