ಹಾಸನ: ಮೊದಲ ಬಾರಿಗೆ ಬೆಂಗಳೂರಿನಿಂದ ಹಾಸನಕ್ಕೆ ರೈಲಿನಲ್ಲಿ ಬಂದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು.
ಮೊದಲ ಬಾರಿಗೆ ಹಾಸನಕ್ಕೆ ರೈಲಿನಲ್ಲಿ ಬಂದ ಜೆಡಿಎಸ್ ವರಿಷ್ಠ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಹಾಸನ ನಿಲ್ದಾಣಕ್ಕೆ ಬರುತ್ತಿದ್ದಂತೆ ಕಾರ್ಯಕರ್ತರು ರೈಲಿನಿಂದ ಇಳಿದ ಗೌಡರಿಗೆ ಪುಷ್ಪವೃಷ್ಟಿ ಸುರಿಸಿದರು. ಹಾಸನ ಅಭಿವೃದ್ಧಿಯ ಹರಿಕಾರ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರಿಗೆ ಜೈ ಎಂದು ಘೋಷಣೆ ಕೂಗಿದರು. ರಾಜ್ಯ ಘಟಕದ ಅಧ್ಯಕ್ಷ ಹೆಚ್. ಕೆ. ಕುಮಾರಸ್ವಾಮಿ, ಮುಖಂಡರಾದ ಬಿ.ವಿ.ಕರೀಗೌಡ, ಸತ್ಯನಾರಾಯಣ, ರಾಜೇಗೌಡ, ಹೆಚ್. ಎಸ್. ಅನಿಲ್ ಕುಮಾರ್ ಅವರು ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಅವರು, ಮೊದಲ ಬಾರಿ ಹಾಸನಕ್ಕೆ ರೈಲಿನಲ್ಲಿ ಬಂದ ನನ್ನನ್ನು ಸ್ವಾಗತಿಸಲು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಬಂದಿರುವುದು ಸಂತಸವಾಗಿದೆ. ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಜತೆ ಚರ್ಚಿಸಲಾಗಿದೆ. ಹಾಸನ, ಬೇಲೂರು, ಶೃಂಗೇರಿ, ಶಿವಮೊಗ್ಗ ಮಾರ್ಗದ ಸರ್ವೆ ಕಾರ್ಯ ಆಗಿದೆ. ಮೈಸೂರು, ಕೊಡಗು ರೈಲು ಮಾರ್ಗವೂ ಆಗಬೇಕು. ಹಲವಾರು ರೈಲ್ವೆ ಮಾರ್ಗಗಳು ಹಳೇ ಮೈಸೂರು ಭಾಗದಲ್ಲಿ ನನೆಗುದಿಗೆ ಬಿದ್ದಿವೆ. ಇವುಗಳನ್ನು ಕಾರ್ಯ ರೂಪಕ್ಕೆ ತರಲು ಹೋರಾಟ ಮಾಡುತ್ತೇನೆ ಎಂದರು.
ಪಕ್ಷ ಪುನಶ್ಚೇತನ ಕುರಿತು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಜತೆ ಹೆಚ್. ಡಿ. ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಪಕ್ಷವನ್ನು ಮತ್ತೆ ಕಟ್ಟುವ ಸಲುವಾಗಿ ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. 1989ರಲ್ಲಿ ಎಲ್ಲರೂ ಒದ್ದರು. ನನ್ನ ಜೊತೆ ಬಿ. ಎಲ್. ಶಂಕರ್, ದತ್ತ, ಉಗ್ರಪ್ಪ ಮಾತ್ರ ಇದ್ದರು. ಮತ್ತೆ ಪಕ್ಷ ಕಟ್ಟಲಿಲ್ಲವೇ? ಈಗಲೂ ರಾಮಸ್ವಾಮಿ, ಬಸವರಾಜ ಹೊರಟ್ಟಿ, ಹೆಚ್. ಕೆ. ಕುಮಾರಸ್ವಾಮಿ ಅವರಂತಹ ನಾಯಕರು ಇದ್ದಾರೆ. ಯಾರೋ ಒಬ್ಬರು ಹೋಗುತ್ತಾರೆ ಎಂಬ ಮಾತ್ರಕ್ಕೆ ಪಕ್ಷ ಮುಳುಗುವುದಿಲ್ಲ. ಜಿ.ಟಿ.ದೇವೇಗೌಡ ಬಿಜೆಪಿಗೆ ಹೋಗಿ ಮಂತ್ರಿಯಾಗಿದ್ದರು. ಮತ್ತೆ ವಾಪಸ್ ಬಂದರು. ಮತ್ತೆ ಹೋಗಬಹುದು. ಅದಕ್ಕೆ ಹೆದರುವುದಿಲ್ಲ. ನನಗೆ ವಯಸ್ಸು 87 ಇದ್ದರೂ ಉತ್ಸಾಹ ಕಡಿಮೆ ಆಗಿಲ್ಲ. ಎದುರಾಳಿಗಳು ಅಪಹಾಸ್ಯ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರ ಕೆಲಸಕ್ಕಾಗಿ ಹೋರಾಟ ಮಾಡುತ್ತೇನೆ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಹೆಚ್. ಎಸ್. ದೊರೆಸ್ವಾಮಿ ಅವರ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವವರ ನಡವಳಿಕೆ ಬಗ್ಗೆ ನಾನು ಟೀಕಿಸುವುದಿಲ್ಲ. ರಾಜ್ಯದ ಜನರು ನಿರ್ಧರಿಸುತ್ತಾರೆ. ದೆಹಲಿ ಹಿಂಸಾಚಾರದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಳ್ಳಲು ಕೇಂದ್ರ ಸರ್ಕಾರ ಹಾಗೂ ಗುಪ್ತಚರ ಇಲಾಖೆ ವೈಪಲ್ಯ ಕಾರಣ ಎಂದು ಅವರು ಆರೋಪಿಸಿದರು.