ಹಾಸನ: ಟ್ರಕ್ ಟರ್ಮಿನಲ್ ವಿಚಾರದ ಸಂಬಂಧ ಇಲ್ಲಿನ ಸಂಸದ, ಎಂಎಲ್ಸಿ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರತಿಷ್ಠೆಗೆ ಬಿದ್ದಿರುವ ಹಾಸನ ಶಾಸಕ ಪ್ರೀತಂ ಗೌಡ ಗ್ರಾಮಸ್ಥರ ವಿರೋಧದ ನಡುವೆಯೂ ಕಾಮಗಾರಿ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ದಶಕಗಳಿಂದ ಹಾಸನದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಬೇಕೆಂದು ಲಾರಿ ಮಾಲೀರ ಸಂಘ ಬೇಡಿಕೆ ಇಟ್ಟಿದ್ದು, ಅದರಂತೆ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಹಾಸನದ ಹೊರವಲಯದ ಕೆಂಚನಹಳ್ಳಿ ಬಳಿಯಿರುವ ಹಾಸನಾಂಬ ವಿಶ್ವವಿದ್ಯಾಲಯದ ಮುಂಭಾಗದ ಸ್ಥಳದಲ್ಲಿ ಕಾಮಗಾರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಅನಾನುಕೂಲವೇ ಹೆಚ್ಚು ಎಂಬುದನ್ನು ಅರಿತ ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಸೇರಿ ಈ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆಯೂ ಹಾಸನ ಶಾಸಕ ಪ್ರೀತಮ್ ಗೌಡ ಕಾಮಗಾರಿ ಆರಂಭಿಸಲು ಮುಂದಾಗಿದ್ದರು ಎಂದು ಹೇಳಲಾಗಿದೆ.
ಪ್ರತಿಭಟನೆ ವೇಳೆ ಜೆಡಿಎಸ್ ಕಾರ್ಯಕರ್ತರು ಕುಪಿತಗೊಂಡು ಉದ್ದೇಶಿತ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದ್ದ ತಡೆಗೋಡೆಯನ್ನು ನೆಲಸಮಗೊಳಿಸಿದ್ದರಿಂದ ಸ್ಥಳದಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿತು. ಇದನ್ನು ನಿಯಂತ್ರಣಗೊಳಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು.
ರೇವಣ್ಣ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ: ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್ ಸದಸ್ಯರು ಮತ್ತು ಮಾಜಿ ಸಚಿವ ಹೆಚ್ ಡಿ ರೇವಣ್ಣ, ಸಂಸದ ಪ್ರಜ್ವಲ್ ಹಾಗೂ ಎಂಎಲ್ಸಿ ಸೂರಜ್ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಉದ್ದೇಶಿತ ಟ್ರಕ್ ಟರ್ಮಿನಲ್ ಪ್ರದೇಶದಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನೆಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸೇರಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಈ ನಡುವೆ ಪ್ರಜ್ವಲ್, ಸೂರಜ್ ರೇವಣ್ಣ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಗೊಳಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹರಸಾಹಸಪಟ್ಟಿದ್ದಾರೆ.