ಹಾಸನ: ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ರಾಜ್ಯದ ಹಲವೆಡೆ ಜೆಡಿಎಸ್ ಇಂದು ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿಹಲವು ಭಾಗಗಳಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಜೆಡಿಎಸ್ನ ಹಲವು ನಾಯಕರು ಭಾಗಿಯಾಗಿದ್ದಾರೆ.
ನಗರದ ಹೇಮಾವತಿ ಪ್ರತಿಮೆಯ ಬಳಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ದಲ್ಲಾಳಿಗಳು, ಕಳ್ಳ-ಕಾಕರಿಗೆ, ಭೂಗಳ್ಳರಿಗೆ ಮತ್ತು ಉದ್ಯಮಿಗಳಿಗೆ ಅನುಕೂಲವಾಗಲಿದೆ. ಇದನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸರ್ಕಾರವನ್ನು ಎಚ್ಚರಿಸಿದರು.
ಹಾಸನದಲ್ಲಿ ಜೆಡಿಎಸ್ ಪ್ರತಿಭಟನೆ ಅರಸಿಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿ, ರಾಜ್ಯದಲ್ಲಿ 300ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಉಪ ಮಾರುಕಟ್ಟೆಗಳು ರೈತರು ಮತ್ತು ವರ್ತಕರ ನಡುವಿನ ಕೊಂಡಿಗೆ ಎಪಿಎಂಸಿ ಒಂದು ಸಾಂಸ್ಥಿಕ ಸಂಸ್ಥೆಯಾಗಿದೆ. ಇಂತಹ ಮಾರುಕಟ್ಟೆಗಳಲ್ಲಿ ಕೆಲಸ ಮಾಡುವ 1ಲಕ್ಷಕ್ಕೂ ಮೇಲ್ಪಟ್ಟು ಹಮಾಲಿಗಳು ಉದ್ಯೋಗ ಕಳೆದುಕೊಂಡು ತಮ್ಮ ಕುಟುಂಬದೊಂದಿಗೆ ಬೀದಿ ಪಾಲಾಗುವ ಸಾಧ್ಯತೆ ಇದೆ. ಹಾಗಾಗಿ ತಕ್ಷಣ ಇಂತಹ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಹಾಗೆಯೇ ಬೇಲೂರಿನ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಮುಂದಿನ ದಿನಗಳಲ್ಲಿ ರೈತರ ಬದುಕಿಗೆ ಉರುಳಾಗಲಿದೆ. ಉದ್ಯಮಿಗಳ ಪಾಲಾಗುವ ಕಾಯ್ದೆ ಇದಾಗಲಿದೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಗ್ರೀವಾಜ್ಞೆ 2020ರನ್ನೂ ಕೈಬಿಡಬೇಕು ಎಂದರು.
1966ರ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾಯ್ದೆಯನ್ನು ಮತ್ತೆ ಮುಂದುವರಿಸಿದರೆ ಮಾತ್ರ ರೈತರ ಬದುಕು ಹಸನಾಗುತ್ತದೆ. ಜೊತೆಗೆ ಸ್ಪರ್ಧಾತ್ಮಕ ಮಾರಾಟದಿಂದ ರೈತರಿಗೆ ಒಳ್ಳೆಯ ಧಾರಣೆ ದೊರಕಲು ಅವಕಾಶ ಸಿಗುತ್ತದೆ ಎಂದು ಹೇಳಿದರು.