ಹಾಸನ: ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ಅವರು ತಮ್ಮ ಎರಡು ವರ್ಷದ ಅವಧಿಯಲ್ಲಿ ಅನುದಾನ ತಂದಿರುವ ಮಾಹಿತಿ ಹಂಚಿಕೊಳ್ಳಲು ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೆ ಬರುವಂತೆ ಜೆಡಿಎಸ್ ಮುಖಂಡ ಅಗಿಲೆ ಯೋಗಿಶ್ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾಗಿ ಅನುದಾನ ತರಲು ಸಾಧ್ಯವಾಗದೇ ಮತ್ತೊಬ್ಬರ ಮೇಲೆ ಆರೋಪ ಮಾಡಬಾರದು. ಕ್ಷೇತ್ರಕ್ಕೆ ತಂದಿರುವ ಅನುದಾನದ ಕುರಿತು ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೆ ಬರುವಂತೆ ಅನೇಕ ಬಾರಿ ಬರುವಂತೆ ಹೇಳಿದ್ದರೂ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ಷೇಪಿಸಿದರು.
ಜೆಡಿಎಸ್ ಪಕ್ಷದವರು ನಾಲ್ಕು ಕಟ್ಟಡ ಕಟ್ಟಿರುವುದು ಅಭಿವೃದ್ಧಿಯಲ್ಲ ಎಂದು ಶಾಸಕರು ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಹಾಸನ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ತಂದಿದ್ದಾರೆ ಎಂದರು.
ಡೈರಿಯಿಂದ ದೊಡ್ಡಪುರ ರಸ್ತೆಗೆ ₹ 30 ಕೋಟಿ, ಹೊಸ ಬಸ್ ನಿಲ್ದಾಣದಿಂದ ಎನ್.ಆರ್.ವೃತ್ತ ಹಾಗೂ ಸಹ್ಯಾದ್ರಿ ವೃತ್ತದವರೆಗೂ ರಸ್ತೆ ನಿರ್ಮಾಣಕ್ಕೆ ₹ 5 ಕೋಟಿ, ಹೊಸಲೈನ್ ರಸ್ತೆಗೆ ₹ 2 ಕೋಟಿ, ತಾಲೂಕು ಕಚೇರಿಯಿಂದ ಸರ್ಕಾರಿ ಆಸ್ಪತ್ರೆವರೆಗೂ ರಸ್ತೆ ನಿರ್ಮಾಣಕ್ಕೆ ₹ 3 ಕೋಟಿ, ಪೆನ್ಷನ್ ಮೊಹಲ್ಲಾಗೆ ₹ 10 ಕೋಟಿ ಸೇರಿ ₹ 67 ಕೋಟಿ ಅನುದಾನದ ಕಾಮಗಾರಿಗಳು ನಡೆದಿವೆ.
ಹೆಚ್.ಎಸ್.ಪ್ರಕಾಶ್ ಅವರು ಶಾಸಕರಾಗಿದ್ದಾಗ ಮತ್ತು ಹೆಚ್.ಡಿ.ರೇವಣ್ಣ ಅವರು ಕ್ಷೇತ್ರದ ಕಸಬಾ ಹೋಬಳಿಯ ವಿವಿಧ ಗ್ರಾಮಗಳ ಅಭಿವೃದ್ಧಿಗೆ ₹ 31 ಕೋಟಿ ಅನುದಾನ ತಂದಿದ್ದಾರೆ. ಸಾಲಗಾಮೆ ಹೋಬಳಿಯ ರಸ್ತೆ ಅಭಿವೃದ್ಧಿಗೆ ₹ 12 ಕೋಟಿ, ದ್ಯಾಪಲಾಪುರ ಮತ್ತು ಕಡಗದ ಹೋಬಳಿ ರಸ್ತೆಗೆ ₹ 80 ಲಕ್ಷ ಸೇರಿ ಒಟ್ಟು ₹ 12 ಕೋಟಿ ಅನುದಾನವನ್ನು ಹಿಂದೆಯೇ ತರಲಾಗಿದೆ ಎಂದು ಅವರು ಅಂಕಿ-ಅಂಶ ನೀಡಿದರು.
ಕ್ಷೇತ್ರಕ್ಕೆ ಅನುದಾನ ತಂದಿರುವ ಕುರಿತು ಪ್ರೀತಮ್ ಗೌಡ ಅವರು ಮಾಹಿತಿ ನೀಡಲಿ. ಅವರ ಕೈಲಿ ಯಾವ ಕೆಲಸವೂ ಆಗುವುದಿಲ್ಲ ಎಂದರೆ ಕೂಡಲೇ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.