ಹಾಸನ :ಈಗೇನೋ ಆಟ ಆಡುತ್ತಿದ್ದಾರೆ. 2023ಕ್ಕೆ ನಾವೇನು ಅಂತಾ ತೋರಿಸುತ್ತೇವೆ. ಕಾಂಗ್ರೆಸ್ ಮಾಡಿದ ತಪ್ಪಿಗೆ ಬಿಜೆಪಿ ಅಧಿಕಾರಕ್ಕೆ ಬಂತು. ಇಲ್ಲ ಅಂದ್ರೆ ಈ ಗಿರಾಕಿ ಎಲ್ಲಿ ಇರ್ತಿದ್ದ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಗೌಡ ವಿರುದ್ಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹರಿಹಾಯ್ದರು.
ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಹೆಚ್.ಡಿ ರೇವಣ್ಣ, ಬಿಜೆಪಿ ಸರ್ಕಾರ ಹಾಸನಕ್ಕೆ ಮಾಡಿದಷ್ಟು ಅನ್ಯಾಯ ಯಾವ ಸರ್ಕಾರವೂ ಮಾಡಿಲ್ಲ. ಹಾಸನದ ಈ ಗಿರಾಕಿ ಯಡಿಯೂರಪ್ಪನ ಸರ್ಕಾರ ಬಂದಿದ್ದಕ್ಕೆ ಜೀವ ಉಳಿಸಿಕೊಂಡಿದ್ದಾನೆ. ನಾನು ಅವನ್ನು ಲೆಕ್ಕಕ್ಕೆ ಇಟ್ಟಿಲ್ಲ, ಅವರು ದೊಡ್ಡ ವ್ಯಕ್ತಿ. ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಅವರು ಯಡಿಯೂರಪ್ಪ ಅವರ ಮಗನ ಜತೆ ಓದಿ ಬಂದಿರುವವರು.
ಬಿಜೆಪಿ ಶಾಸಕ ಪ್ರೀತಮ್ ಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿರುವುದು.. ಅವರು ದೊಡ್ಡವರು. ದಿನ ಅವರ ಮನೆಯಲ್ಲಿ ದಲಿತರಿಗೆ ಊಟ ಹಾಕುತ್ತಿದ್ದಾರೆ. ಮೀಸಲಾತಿ ಇಲ್ಲದಿದ್ದಾಗ ಅಧಿಕಾರ ಕೊಟ್ಟಿರುವ ಪಕ್ಷ ಯಾವುದಾದರೂ ಇದ್ದರೆ ಅದು ದೇವೇಗೌಡರ ಪಕ್ಷ. ಇವರ ಯೋಗ್ಯತೆಗೆ ಅಲ್ಪಸಂಖ್ಯಾತರ ಮೇಲೆ ಆರೋಪ ಮಾಡಲು ಹೊರಟಿದ್ದಾರೆ. ನಮ್ಮ ಮನೆಗೆ ಎಷ್ಟು ಜನ ದಲಿತರನ್ನು ಕರೆದುಕೊಂಡು ಬರುತ್ತಾರೋ ಬರಲಿ. ನಾನು ಊಟ ಹಾಕುತ್ತೇನೆ ಎಂದು ಕಿಡಿಕಾರಿದರು.
ನಮ್ಮ ಬಗ್ಗೆ ಮಾತನಾಡದಿದ್ದರೆ ಅವರ ಹೊಟ್ಟೆಪಾಡು ನಡೆಯಲ್ಲ. ಯಡಿಯೂರಪ್ಪ ಈ ಜಿಲ್ಲೆಗೆ ಏನು ಕಡಿದು ಕಟ್ಟೆ ಹಾಕಿದ್ದಾರೆ. ನಾನು ಈವರೆಗೂ ತಡೆದಿದ್ದೇನೆ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗ ಅಲ್ಲ. ಹಾಸನಕ್ಕೆ ಭವಾನಿ ರೇವಣ್ಣ ಬರಲಿ ಎಂದು ಆಹ್ವಾನ ನೀಡಿದ್ದ ಪ್ರೀತಂಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇವನನ್ನು ಕೇಳಿ ಯಾರೂ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಮೊದಲು ಅವರ ವಿಚಾರ ನೋಡಿಕೊಳ್ಳಲು ಹೇಳಿ ಎಂದು ಟಾಂಗ್ ನೀಡಿದರು.
ಇನ್ನು ಭವಾನಿ ರೇವಣ್ಣ ಒಂದು ದಿನ ಎಂಎಲ್‌ಎ ಆಗೇ ಆಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಐದು ವರ್ಷ, ಹತ್ತು ವರ್ಷ ಆಗತ್ತೋ ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ ಎಂದು ಮಾರ್ಮಿಕವಾಗಿ ಮುಂದಿನ ಚುನಾವಣೆಯಲ್ಲಿ ನಾನು ಹಾಸನಕ್ಕೆ ಪಾದಾರ್ಪಣೆ ಮಾಡುತ್ತೇನೆ ಎನ್ನುವ ಸೂಚನೆ ನೀಡಿದರು.
ಅಧಿಕಾರಿಗಳಿಗೆ ಎಚ್ಚರಿಕೆ :ಹಾಸನದಲ್ಲಿ ಟ್ರಕ್ ಟರ್ಮಿನಲ್ ಹಾಗೂ ನೂತನ ತಾಲೂಕು ಕಚೇರಿ ನಿರ್ಮಾಣದ ವಿಚಾರಕ್ಕೆ ಗರಂ ಆದ ರೇವಣ್ಣ, ವಿರೋಧದ ನಡುವೆ ಮಾಡಲು ಹೋಗಿ ಏನಾದರೂ ಕಾನೂನು ಸುವ್ಯವಸ್ಥೆಗೆ ಭಂಗ ಆದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ. ಹಾಸನ ಒಬ್ಬ ಎಂಎಲ್‌ಎ ಸ್ವತ್ತಲ್ಲ. ಇವನ್ಯಾವನು ಹೇಳಲು, ಹಾಸನ ತಾಲೂಕು ಕಚೇರಿ ನಿರ್ಮಾಣಕ್ಕೆ ಹಣ ಕೊಟ್ಟಿದ್ದು ನಾನು. ಮಂತ್ರಿಗಳು ಹೇಳಿದ್ದು ಅಂತಾ ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ.
ಇದುವರೆಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದಿದ್ದೇವೆ. ನಾಳೆ ಹೆಚ್ಚು ಕಮ್ಮಿ ಆದರೆ ಜಿಲ್ಲಾಧಿಕಾರಿ ನೇರ ಹೊಣೆಯಾಗುತ್ತಾರೆ. ದೊಡ್ಡಹಳ್ಳಿ ಗೋಲಿಬಾರ್ ರೀತಿ ಆಗುತ್ತದೆ. ಆಸ್ಪತ್ರೆ ಕಟ್ಟಿದಾಗ ಇದು ಹುಟ್ಟಿತ್ತೋ ಇಲ್ಲವೋ. ಒತ್ತಡ ಹಾಕಿ ದೊಡ್ಡಗೇಣಿಗೆರೆ ಪಂಚಾಯತ್ ಪಿಡಿಒನಿಂದ ಅನುಮತಿ ಪಡೆದರೆ ಸುಮ್ಮನಿರಲ್ಲ ಎಂದು ಕೆಲವು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ತೊರೆಯುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಪಕ್ಷ ಬಿಡಲ್ಲ. ಮಾರನೇ ದಿನ ನನ್ನ ಜತೆ ಶಿವಲಿಂಗೇಗೌಡ ಫೋನ್‌ನಲ್ಲಿ ಮಾತನಾಡಿದ್ದಾರೆ. ನಮ್ಮ ತಾಯಿ ಆಣೆ ಪಕ್ಷ ಬಿಡಲ್ಲ ಎಂದು ಹೇಳಿದ್ದಾರೆ. ಯಾವ ಕಾರಣದಿಂದಲೂ ಜೆಡಿಎಸ್ ಬಿಡಲ್ಲ. ನಾನು ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ. ಜತೆಗೆ ಐದಾರು ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಹಾಗಾಗಿ, ನಾವೆಲ್ಲ ಒಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.