ಹಾಸನ: ಪ್ರಧಾನಿ ಮೋದಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ನಾನು ಹಿಂದೂ ಅಲ್ಲವೇ? ಆದರೆ, ಎಲ್ಲರನ್ನೂ ನಾವು ವಿಶ್ವಾಸಕ್ಕೆ ತೆಗೆದುಕೊಳ್ತೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಪ್ರಧಾನಿಗೆ ಟಾಂಗ್ ಕೊಟ್ಟರು.
ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಕಲಂ 370 ಬಗ್ಗೆ ಪ್ರಧಾನಿ ಮೋದಿ, ದೇವೇಗೌಡರ ನಿಲುವು ತಿಳಿಸಬೇಕೆಂದು ಸವಾಲು ಹಾಕಿದ್ದರು. ಈ ಬಗ್ಗೆ ಚನ್ನರಾಯಪಟ್ಟಣ ತಾಲೂಕಿನ ಯಲಿಯೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಲಂ 370 ಅನ್ನು ಏಕೆ ರದ್ದು ಮಾಡಬೇಕು ಎಂದು ಪ್ರಶ್ನಿಸಿದರು.
ಸೆಕ್ಷನ್ 370ನ್ನು ನಾನು ಕೊಟ್ಟಿದ್ದಲ್ಲ. ದೇಶ ಒಗ್ಗೂಡುವ ಸಂದರ್ಭದಲ್ಲಿ ಸಂವಿಧಾನದಂತೆ ಕಾಶ್ಮೀರಕ್ಕೆ ಈ ಪ್ರಾತಿನಿಧ್ಯ ನೀಡಲಾಯಿತು. ಕಾಶ್ಮೀರದ ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡೇ ಈ ಕಲಂ ನೀಡಲಾಯ್ತು. ನಾನು ಹಿಂದೂ. ನಾನೇನು ಮುಸ್ಲಿಂ ಅಥವಾ ಕ್ರಿಶ್ಚಿಯನ್ನಾ? ಎಂದು ಪ್ರಶ್ನಿಸಿದ ಅವರು, ಆದರೆ ನಮಗೆ ಎಲ್ಲರ ಹಿತಾಸಕ್ತಿ ಮುಖ್ಯ ಎಂದರು.