ಹಾಸನ:ಕೇಂದ್ರ ಸರ್ಕಾರ ಕೂಡಲೇ ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆಯು ಎನ್.ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಬಿಜಿಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಎನ್ಆರ್ಸಿ ಹಾಗೂ ಸಿಎಎ ಜಾರಿ ಹಿಂಪಡೆಯುವಂತೆ ಒತ್ತಾಯಿಸಲಾಯಿತು. ಪ್ರತಿಭಟನೆ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ದೇಶದಲ್ಲಿ ಕಾಯ್ದೆ ವಿರುದ್ಧ ಅಸಮಾಧಾನ ಎದ್ದಿರುವ ಕಾರಣ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಮ ಮಂದಿರ ತೀರ್ಪು ಬಂದ ನಂತರ ಮುಸ್ಲಿಂ ಸಮುದಾಯ ಧರ್ಮ ಮರೆತು ಒಟ್ಟಾಗಿ ನಿಂತಿದೆ. ಕಾಶ್ಮೀರ ವಿಷಯದಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಮುಸ್ಲಿಂರಿಗೆ ತೊಂದರೆಯೊಡ್ಡುವ ಕಾಯ್ದೆ ತಂದಿದ್ದಾರೆ. ಅಂಬೇಡ್ಕರ್ ಸಂವಿಧಾನದ ಆಶಯದ ವಿರುದ್ಧ ಈ ಕಾಯ್ದೆ ತರಲಾಗಿದೆ. ಎಲ್ಲಾ ಧರ್ಮ ಸಮುದಾಯಗಳ ಐಕ್ಯತೆಗೆ ಹೆಸರಾಗಿರುವ ಭಾರತದಲ್ಲಿ ಧರ್ಮಗಳ ವಿರುದ್ಧ ಕಾಯ್ದೆ ತಂದಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ ಎಂದರು.
ಜೆಡಿಎಸ್ ಬೃಹತ್ ಪ್ರತಿಭಟನೆ ಶಾಸಕ ಲಿಂಗೇಶ್ ಮಾತನಾಡಿ, ದೇಶದ ಮುಸ್ಲಿಂ ಸಮುದಾಯದವರು ಹಲವು ದಶಕದಿಂದ ವಾಸಿಸುತ್ತಿದ್ದಾರೆ. ಏಕಾಏಕಿ ದಾಖಲೆ ಒದಗಿಸಿ ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ಕೋಮು ದಳ್ಳುರಿಯಲ್ಲಿ ಉರಿಯುವ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದರು. ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ದೇಶದ ಆರ್ಥಿಕತೆ ಕುಸಿದಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಭಾರತ ಆಗಲಿದೆ. ಸಾರ್ವಜನಿಕ ಚರ್ಚೆ, ಹಲವು ಸಮುದಾಯದ ಅಭಿಪ್ರಾಯ ಸಂಗ್ರಹಿಸಿದ ನಂತರ ಕಾಯ್ದೆ ಜಾರಿ ಸರಿ. ಕಾಯ್ದೆ ಹೇರಿಕೆಯ ರಾಜಕೀಯ ಮಾಡದೇ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು. ಮುಸ್ಲಿಂ ಧರ್ಮಗುರು ಅಭಿವುಲ್ಲ ಮಾತನಾಡಿ, ಭಾರತ ಕೇವಲ ಹಿಂದು, ಮುಸ್ಲಿಂ, ಸಿಖ್ಖರದ್ದಲ್ಲ, ಇದು ಸರ್ವಾಜನಾಂಗದ ಶಾಂತಿಯ ತೋಟ. ಇದನ್ನ ಒಡೆಯಲು ಮುಂದಾದ್ರೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನೇ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ರು. ಪೊಲೀಸ್ ಭದ್ರತೆ :
ಪ್ರತಿಭಟನೆ ತೀವ್ರತೆ ಅರಿತ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಎಎಸ್ಪಿ ನಂದಿನಿ ಸೇರಿದಂತೆ ಹಾಸನ, ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ಗಳು ಹಾಗೂ ಕೆಎಸ್ಆರ್ಪಿ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟು ಹೆಚ್ಚಿನ ಬಂದೋಬಸ್ತ್ ಒದಗಿಸಿದ್ರು.