ಹಾಸನ: ಜೂನ್ ತಿಂಗಳಲ್ಲಿ ಎತ್ತಿನಹೊಳೆಯಿಂದ 33 ಕಿ.ಮೀ. ದೂರದವರೆಗೆ ನೀರು ಕೊಡುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬೆಟ್ಟದ ಆಲೂರು ಬಳಿ ಎತ್ತಿನಹೊಳೆ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಎತ್ತಿನಹೊಳೆ ಯೋಜನೆ ಪ್ರಾರಂಭವಾಗಿ ಏಳು ವರ್ಷಗಳಾಗಿದೆ. ಸಕಲೇಶಪುರ ಭಾಗದಲ್ಲಿ ಈಗಾಗಲೇ ಸಮರ್ಪಕವಾಗಿ ಪರಿಹಾರ ನೀಡಲಾಗುತ್ತಿದೆ. ಆಲೂರು ಭಾಗದಲ್ಲಿ ಈಗಾಗಲೇ 100 ಕೋಟಿ ರೂ ಹಣವನ್ನು ಬಿಡುಗಡೆ ಮಾಡಿದ್ದೇ. ಜೊತೆಗೆ ಮುಂದಿನ ಜೂನ್ ತಿಂಗಳಲ್ಲಿ ಎತ್ತಿನಹೊಳೆಯಿಂದ ನೀರು ಹರಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಎತ್ತಿನಹೊಳೆ ಕಾಮಗಾರಿ ವೀಕ್ಷಿಸಿದ ಜಾರಕಿಹೊಳಿ ಬೈರಗೊಂಡನಹಳ್ಳಿ ಬಳಿ ಆದಷ್ಟು ಬೇಗ ಕೆಲಸ ಮುಗಿಸಿ, ಚಿತ್ರದುರ್ಗ ಜಿಲ್ಲೆಯ ವೇದಾವತಿ ವ್ಯಾಲಿ ತನಕ ನೀರು ಕೊಟ್ಟು ಅಲ್ಲಿಂದ ವಾಣಿವಿಲಾಸ ಜಲಾಶಯಕ್ಕೆ ಪ್ರಾಯೋಗಿಕವಾಗಿ ಹರಿಸಿದ ಬಳಿಕ, ಕೋಲಾರ ಚಿಕ್ಕಬಳ್ಳಾಪುರದವರೆಗೂ ನೀರು ಕೊಡುತ್ತೇವೆ ಎಂದರು.
ಸ್ಥಳೀಯ ಶಾಸಕರ ನೇತೃತ್ವದಲ್ಲಿ ಜಮೀನು ಕೊಟ್ಟ ರೈತರೊಂದಿಗೆ ಮೀಟಿಂಗ್ ಮಾಡಿ, ಮಾರ್ಚ್ ಒಳಗೆ ಅವರಿಗೆ ಪರಿಹಾರ ನೀಡುವ ಭರವಸೆಯನ್ನು ಸಚಿವರು ನೀಡಿದರು.
ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಪ್ರಸ್ತುತ ಇರುವ ದರಕ್ಕೆ ನಾಲ್ಕು ಪಟ್ಟು ಪರಿಹಾರ ಕೊಡಲು ನಾವು ಸಿದ್ಧರಿದ್ದು, ₹ 12,000 ಕೋಟಿ ಆರಂಭಿಕ ಮೊತ್ತದಿಂದ ಪ್ರಾರಂಭವಾಗಿರುವ ಯೋಜನೆ ಈಗ 7 ಸಾವಿರ ಕೋಟಿ ಕೆಲಸ ಆಗಿದೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲವನ್ನ ಕೂಡ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ, ರೈತರಿಗೆ ಯಾವುದೇ ಅನ್ಯಾಯವಾಗದಂತೆ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡಲಾಗುತ್ತದೆ ಎಂದರು.