ಹಾಸನ: ಎಲ್ಲರಂತೆ ನಾನೂ ಕೂಡ ಕೊರೊನಾ ಪರೀಕ್ಷೆ ಮಾಡಿಸಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿಕೆ ಕೊಡುವ ಮೂಲಕ, ಎರಡ್ಮೂರು ದಿನಗಳಿಂದ ಹರಡಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅಲ್ಲದೆ ನಮ್ಮ ಕುಟುಂಬದವರು ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಎಲ್ಲರದ್ದೂ ನೆಗಟಿವ್ ಬಂದಿದೆ ಎಂದಿದ್ದಾರೆ.
‘ನಾನು ಕೂಡ ಕೊರೊನಾ ಟೆಸ್ಟ್ ಮಾಡಿಸಿದ್ದೇನೆ, ನೆಗೆಟಿವ್ ಬಂದಿದೆ’: ಹೆಚ್.ಡಿ ರೇವಣ್ಣ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬೆಂಗಾವಲು ವಾಹನದಲ್ಲಿದ್ದವರಿಗೆ ಕೊರೊನಾ ಬಂದಿದ್ದರಿಂದ ನಾನು ಕೂಡ ಕೊರೊನಾ ಪರೀಕ್ಷೆ ಮಾಡಿಸಿದ್ದು, ಪರೀಕ್ಷೆಯಲ್ಲಿ ನೆಗಟಿವ್ ಬಂದಿದೆ. ರಿಸಲ್ಟ್ ಬರುವವರಿಗೂ ಎಲ್ಲೂ ಹೋಗಲಿಲ್ಲ ಎಂದರು.
ಕೊರೊನಾ ಮಹಾಮಾರಿ ದಿನೆ ದಿನೇ ಹೆಚ್ಚಾಗುತ್ತಿರುವುದರಿಂದ ನನ್ನ ಕ್ಷೇತ್ರವಾದ ಹೊಳೆನರಸೀಪುರದಲ್ಲಿ ಎಲ್ಲರನ್ನೂ ಕರೆಯಿಸಿ ಸಭೆ ಮಾಡಿ ಮಧ್ಯಾಹ್ನ 1 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೂ ಸ್ವಯಂಪ್ರೇರಿತ ಲಾಕ್ಡೌನ್ ಮಾಡಿಸಲಾಗುತ್ತಿದೆ ಎಂದರು.
ಅಲ್ಲದೆ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಿದ್ದು, ಪ್ರತಿ ತಾಲೂಕಿನಲ್ಲಿ ಸ್ವಯಂ ಪ್ರೇರಿತ ಲಾಕ್ಡೌನ್ ಮಾಡಬೇಕು ಮತ್ತು ಇಡೀ ರಾಜ್ಯವನ್ನೇ ಸಂಪೂರ್ಣವಾಗಿ ಲಾಕ್ಡೌನ್ ಮಾಡಿದರೆ ಸೂಕ್ತ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ರೈತರು ಬೆಳೆದ ಬೆಳೆಗಳು ನಷ್ಟವಾಗಿ ಸಂಕಷ್ಟದಲ್ಲಿದ್ದು, ಇದುವರೆಗೂ ಯಾವ ಪರಿಹಾರವಿಲ್ಲ. 5 ಸಾವಿರ ರೂ. ಪ್ಯಾಕೇಜ್ ನೀಡಿರುವುದಿಲ್ಲ ಎಂದರು. ನೂತನ ಜಿಲ್ಲಾಡಳಿತ ಕಛೇರಿ ನಿರ್ಮಾಣವಾಗುತ್ತಿದೆ. ಜೊತೆಗೆ ವಸತಿ ಗೃಹವನ್ನು ಮಾಡುವ ಮೂಲಕ ಬಿಜೆಪಿ ಕಾಲದಲ್ಲಿಯೇ ಅವೆಲ್ಲಾ ನಿರ್ಮಾಣವಾಗಿದೆ ಎಂದಾಗಲಿ ಎಂದು ವ್ಯಂಗ್ಯವಾಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಆಡಳಿತಕ್ಕೆ ಹಣವನ್ನು ಮಂಜೂರು ಮಾಡಿ ಅದರ ಆದೇಶ ಮಾಡಲಾಗಿದೆ ಎಂದರು. ಈಗಿರುವ ಜಿಲ್ಲಾಡಳಿತದ ಹಿಂಭಾಗವಿರುವ ನ್ಯಾಯಾಲಯ ಒಡೆದು ನೂತನ ಕಚೇರಿ ನಿರ್ಮಾಣಕ್ಕೆ ಕಂದಾಯ ಇಲಾಖೆ ಅನುಮತಿ ನೀಡಿದೆ ಎಂದರು.