ಅರಕಲಗೂಡು (ಹಾಸನ) :ತಾಲೂಕಿನ ಕಸಬಾ, ಮಲ್ಲಿಪಟ್ಟಣ, ಕೊಣನೂರು, ದೊಡ್ಡಮಗ್ಗೆ ಹೋಬಳಿ ಹಾಗೂ ಸೋಮವಾರಪೇಟೆ ತಾಲೂಕಿನ ಹಲವು ಹಳ್ಳಿಗಳ 225 ಕೆರೆಗಳಿಗಳಿಗೆ ನೀರು ತುಂಬಿಸುವ ಬಹುನಿರೀಕ್ಷಿತ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕಾಮಗಾರಿ 190 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡಿದೆ. ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಎ ಟಿ ರಾಮಸ್ವಾಮಿ ತಿಳಿಸಿದರು.
ಅಧಿಕಾರಿಗಳೊಂದಿಗೆ ಕೊಡಗು ಜಿಲ್ಲೆ ಕಟ್ಟೇಪುರ ಹೇಮಾವತಿ ಹಿನ್ನೀರು ಬಳಿ ನಡೆಯುತ್ತಿರುವ ಏತ ನೀರಾವರಿ ಯೋಜನೆ ಕಾಮಗಾರಿ ಜಾಕ್‌ವೆಲ್ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, ಕೆಲಸ ಆರಂಭಗೊಂಡು ಹಲವು ತಿಂಗಳು ಕಳೆದಿದೆ. 50 ಕೋಟಿ ರೂ. ವೆಚ್ಚದಲ್ಲಿ ರೈಸಿಂಗ್ ಮೆನು ಪೈಪ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ.
ಕೆಲವು ಸ್ಥಳದಲ್ಲಿ ತಾಂತ್ರಿಕ ಕಾರಣದಿಂದ ಕೆಲಸ ಆರಂಭಗೊಂಡಿಲ್ಲ. ಸದ್ಯದಲ್ಲಿ ಅದು ಕೂಡ ಆಗಲಿದೆ ಎಂದು ಹೇಳಿದರು. ಏತ ನೀರಾವರಿ ಯೋಜನೆಗೆ ಮೊದಲ ಹಂತದಲ್ಲಿ 120 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಉಳಿದ 70 ಕೋಟಿ ರೂ. ಬಿಡುಗಡೆಗೊಳಿಸಬೇಕೆಂದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಒತ್ತಾಯಿಸಲಾಗಿದೆ. ನಿಗದಿತ ಅವಧಿಯಲ್ಲಿ ಉಳಿದ ಹಣ ಬಿಡುಗಡೆಗೊಳ್ಳಲಿದೆ. ಮಳೆಗಾಲ ಸಮೀಪವಿರುವ ಹಿನ್ನೆಲೆ ಕೂಡಲೇ ಜಾಕ್‌ವೆಲ್ ಕಾಮಗಾರಿ ಪೂಣಗೊಳಿಸಬೇಕು.
ಇಲ್ಲವಾದರೆ, ನೀರು ತುಂಬಿದ ಮೇಲೆ ಕೆಲಸಕ್ಕೆ ಹಿನ್ನೆಡೆಯಾಗಲಿದೆ. ದೊಡ್ಡ ಬಂಡೆ ಸಿಕ್ಕಿರುವ ಕಾರಣ ಹಾಗೂ ಕೊರೊನಾ ಕಂಡು ಬಂದ ಹಿನ್ನೆಲೆ ಕಾರ್ಮಿಕರು ಕೆಲಸ ಬಿಟ್ಟು ಊರಿಗೆ ಹೋಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲೆಟಿನ್ ಕಡ್ಡಿ ಬಳಸಿ ಕಲ್ಲು ಬಂಡೆ ಸಿಡಿಸಲು ಅವಕಾಶವಿಲ್ಲ. ಇದನ್ನು ಅರಿತು ಹೈದರಾಬಾದ್‌ನಿಂದ ತಜ್ಞರ ತಂಡ ಬಂದಿದ್ದು, 20 ದಿನಗಳಲ್ಲಿ ಬಂಡೆ ತೆರವುಗೊಳಿಸುವ ಕೆಲಸವನ್ನು ನಿರ್ವಹಿಸಲಿದ್ದಾರೆ. ಇದಾದ ಬಳಿಕ ಜಾಕ್‌ವೆಲ್ ಕೆಲಸ ತ್ವರಿತಗತಿಯಲ್ಲಿ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.