ಹಾಸನ: ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಸುಸಜ್ಜಿತವಾದ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಟ್ಟಡವಾಗಬೇಕು ಎಂದು ಹಿಂದಿನ ಸಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಉದ್ದೇಶವಾಗಿತ್ತು. ಇಬ್ಬರ ಕೊಡುಗೆಯಾಗಿ ಇಂದು 6.50 ಕೋಟಿ ರೂ. ವೆಚ್ಚದ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಜೊತೆಗೆ ಒಂದು ಕೋಟಿ ರೂ. ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಿಸಲಾಗುತ್ತಿದ್ದು, ಸರ್ಕಾರಿ ವಿಜ್ಞಾನ ಕಾಲೇಜು ಒಂದು ಪ್ರತಿಷ್ಠಿತ ಕಾಲೇಜು ಆಗಿದ್ದು, ಈ ಕಾಲೇಜಿನಲ್ಲಿ ಶಿಕ್ಷಣ ಪಡೆದವರು ಉನ್ನತ ಸ್ಥಾನದಲ್ಲಿದ್ದು, ಜಿಲ್ಲೆಗೆ ಮತ್ತು ತಾಲೂಕಿಗೆ ಕೀರ್ತಿ ತಂದುಕೊಟ್ಟಿರುವ ಕಾಲೇಜು ಇದಾಗಿದೆ. ಉತ್ತಮ ರೀತಿಯಲ್ಲಿ ಕಟ್ಟಡದ ಕಾಮಗಾರಿಯನ್ನು 18 ತಿಂಗಳಲ್ಲಿ ಮುಗಿಸಿ ಪ್ರಾಂಶುಪಾಲರಿಗೆ ಒಪ್ಪಿಸಲಾಗುವುದು ಎಂದು ಹೇಳಿದರು.
ನಗರದ ಸುತ್ತಮುತ್ತ 12 ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಗಳಿಗೆ ಪೂಜೆ ನೆರವೇರಿಸಲಾಗಿತ್ತು. ಈಗ ಕಾಮಗಾರಿ ಮುಗಿದು ಸಾರ್ವಜನಿಕರ ಸೇವೆಗೆ ಸಿದ್ಧವಾಗಿವೆ. ಇನ್ನೂ 24 ಕುಡಿಯುವ ನೀರಿನ ಘಟಕಗಳು ಸಿದ್ಧವಾಗುತ್ತಿದ್ದು, ಹಾಸನ ನಗರ ಮತ್ತು ಕಸಬಾ ಬಡಾವಣೆಗಳಲ್ಲಿ ಕೆಲಸವನ್ನು ಪ್ರಾರಂಭ ಮಾಡಲಾಗಿದೆ ಎಂದರು. ಡಿಸೆಂಬರ್ ಅಂತ್ಯದೊಳಗೆ ಹಾಸನ ಕ್ಷೇತ್ರದಲ್ಲಿ 36 ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭವಾಗಲಿವೆ ಎಂದು ಅವರು ಹೇಳಿದರು.