ಹಾಸನ:ಬೇಲೂರು ತಾಲೂಕಿನ ರೈತರ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಜಾರಿಗೆ ತರಲಾಗುವುದು. ಜೊತೆಗೆ ಪುಷ್ಪಗಿರಿಯಲ್ಲಿ ಜಾತ್ಯಾತೀತವಾಗಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಪುಷ್ಪಗಿರಿ ಮಠದ ಪೀಠಾಧ್ಯಕ್ಷ ಸೋಮಶೇಖರ ಸ್ವಾಮೀಜಿ ಹೇಳಿದರು.
ಬೇಲೂರಿನ ರೈತರ ವಿಕಾಸಕ್ಕೆ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಜಾರಿ: ಸ್ವಾಮೀಜಿ
ಪುಷ್ಪಗಿರಿ ಮಠವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಲು ಜನವರಿ 4, 5ರಂದು ಪುಷ್ಪಗಿರಿ ರಾಷ್ಟ್ರೀಯ ಉತ್ಸವ ನಡೆಯಲಿದೆ.
ಪುಷ್ಪಗಿರಿ ಬೆಟ್ಟದಲ್ಲಿ ಆಯೋಜಿಸಿದ್ದ ಪೂರ್ವಸಭೆಯಲ್ಲಿ ಮಾತನಾಡಿದ ಅವರು, ಮಠವುಜಾತಿ, ಧರ್ಮ, ವರ್ಗರಹಿತವಾಗಿ ಹತ್ತಾರು ವರ್ಷಗಳಿಂದ ಸಮಾಜಮುಖಿ ಮತ್ತು ಜನಪರ ಧಾರ್ಮಿಕ ಸಮಾರಂಭಗಳನ್ನು ನಡೆಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮಠವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಪ್ರತಿ ವರ್ಷ ಜನವರಿ 4, 5ರಂದು ಪುಷ್ಪಗಿರಿ ರಾಷ್ಟ್ರೀಯ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರು, ರಾಜ್ಯದ ಸಿಎಂ, ಸಚಿವರು, ಶಾಸಕರು ಮತ್ತು ಎಲ್ಲಾ ಪಕ್ಷದ ಪ್ರಮುಖ ಮುಖಂಡರು ಹಾಜರಾಗಲಿದ್ದಾರೆ. ಅಂದು ಉತ್ಸನ ಹಳೇಬೀಡಿನಿಂದ ಆರಂಭವಾಗಲಿದ್ದು, 100ಕ್ಕೂ ಅಧಿಕ ಜಾನಪದ ಕಲಾ ತಂಡಗಳು, 1109 ಪೂರ್ಣಕುಂಭ ಕಳಸಗಳ ಮೂಲಕ ಅದ್ಧೂರಿ ಮೆರವಣಿಗೆ ಮಾಡಲಾಗುತ್ತದೆ ಎಂದರು.