ಹಾಸನ: ಪಡಿತರ ಆಹಾರವನ್ನು ಬಡ ಜನರಿಗೆ ವಿತರಿಸಬೇಕಾಗಿದ್ದ 500ಕ್ಕೂ ಹೆಚ್ಚು ರಾಗಿ ಚೀಲವನ್ನು ಕಳ್ಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಹೊರಟಿದ್ದ ಲಾರಿಯನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಹಸ್ಯ ಕಾರ್ಯಚರಣೆ ಮೂಲಕ ಭೇದಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆಯಿಂದ ಹಾಸನಕ್ಕೆ ಸಾಗಿಸಲಾಗುತ್ತಿದ್ದ ಲಾರಿಯನ್ನು ಹಿಮ್ಮೆಟ್ಟಿದ ಎಎಪಿ ಪಕ್ಷದ ಕಾರ್ಯಕರ್ತರು, ನಗರದ ಕೆ.ಎಂ.ಎಫ್ ಹಾಲಿನ ಘಟಕದ ಬಳಿ ಲಾರಿ ತಡೆದು ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ:ಕಾಳಸಂತೆಯಲ್ಲಿ ಪಡಿತರ ಪದಾರ್ಥಗಳು ಮಾರಾಟವಾಗುತ್ತಿರುವ ಬಗ್ಗೆ ಆಪ್ ಪಕ್ಷದ ಮುಖಂಡರಿಗೆ ಮಾಹಿತಿ ತಿಳಿದು ಬರುತ್ತದೆ. ಬಳಿಕ ಕಾರ್ಯಾಚರಣೆ ಆರಂಭಿಸಿದ ಕಾರ್ಯಕರ್ತರಿಗೆ ಬಂಗಾರಪೇಟೆಯ ಹರೀಶ್ ಎಂಬ ವ್ಯಕ್ತಿ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಬಳಿಕ ವ್ಯಾಪರಸ್ಥರಂತೆ ಆಪ್ ಕಾರ್ಯಕರ್ತರು ಹರೀಶ್ಗೆ ಕರೆ ಮಾಡಿ ಒಂದು ಲೋಡ್ ರಾಗಿ ಬೇಕಾಗಿದೆ ಎಂದು ಕೇಳಿದ್ದಾರೆ. ಇನ್ನು ಹರೀಶ್ ರಾಗಿ ಚೀಲಗಳಿಗೆ ತಲಾ 1,850 ರೂಪಾಯಿಗೆ ಕೊಡಲು ಒಪ್ಪಿದ್ದಾನೆ. ರಾಗಿ ಬಂದ ನಂತರ ದುಡ್ಡು ಕೊಡುವುದಾಗಿ ಆಪ್ ಕಾರ್ಯಕರ್ತರು ಹರೀಶ್ ಜೊತೆ ಡಿಲ್ ಕುದುರಿಸಿದ್ದಾರೆ.
ಅದರಂತೆ ಹರೀಶ್ ಇಂದು ಕೋಲಾರದಿಂದ ಹಾಸನಕ್ಕೆ 500 ಮೂಟೆ ರಾಗಿ ಚೀಲವನ್ನ ಲಾರಿಯಲ್ಲಿ ಹೊತ್ತು ತರುತ್ತಿದ್ದ ವೇಳೆ ಕಾರ್ಯಕರ್ತರು ಲಾರಿಯನ್ನು ನಗರದ ಡೈರಿ ಸರ್ಕಲ್ನಲ್ಲಿ ತಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.