ಜನ ಸಾಯಬೇಕಾದ್ರೆ ನಾನು ಮನೇಲಿ ಸುಮ್ಮನೆ ಕೂರಲು ಆಗಲ್ಲ: ಹೆಚ್.ಡಿ.ರೇವಣ್ಣ
ಬೆಂಗಳೂರಲ್ಲಿ ಜನಪ್ರತಿನಿಧಿಗಳಿಗೆ ಮತ್ತು ಉಳ್ಳವರಿಗೆ ಬೆಡ್ ಸಿಗುತ್ತಿದೆ. ಬಡವರಿಗೆ ಬೆಡ್ ಸಿಗದೇ ಅವರು ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಹಾಸನದಲ್ಲಿ ತರಕಾರಿ ಮಾರುವವರಿಗೆ ಪೊಲೀಸ್ರು ತೊಂದರೆ ಕೊಡಬಾರದು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮನವಿ ಮಾಡಿದರು.
ಹಾಸನ:ಕೋವಿಡ್ನಿಂದ ಯುವಜನತೆ ಕೂಡ ಬಲಿಯಾಗುತ್ತಿದ್ದಾರೆ. ನನ್ನ ಹೆಂಡತಿ ಮನೆ ಬಿಟ್ಟು ಹೋಗಬೇಡಿ ಎನ್ನುತ್ತಾಳೆ. ನನ್ನ ಜಿಲ್ಲೆ ಜನ ಸಾಯುತ್ತಿರುವಾಗ ನಾನು ನೋಡಿಕೊಂಡು ಸುಮ್ಮನೆ ಕೂರಲು ಆಗೋದಿಲ್ಲ. ಅದಕ್ಕೆ ಮುಖ್ಯಮಂತ್ರಿಗಳ ಮನೆ ಮುಂದೆ ಹೋಗಿದ್ದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದ್ರು.
ಹಾಸನದ ಪ್ರವಾಸಿ ಮಂದಿರಲ್ಲಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಆದ ಪರಿಸ್ಥಿತಿ ನಮ್ಮ ಜಿಲ್ಲೆಯಲ್ಲಿ ಆಗಬಾರದು. ಆಕ್ಸಿಜನ್ ಕೊರತೆ ನೀಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿರಬೇಕು. ಇಂದು ಜಿಲ್ಲೆಯಲ್ಲಿ 2600 ಪ್ರಕರಣ ಪತ್ತೆಯಾಗಿರುವುದು ಬೆಚ್ಚಿ ಬೀಳಿಸಿದೆ. ಎರಡನೇ ಕೋವಿಡ್ ಅಲೆಯಲ್ಲಿ ಇವರೆಗೆ 154 ಮಂದಿ ಜಿಲ್ಲೆಯಲ್ಲಿ ಸಾವಿಗೀಡಾಗಿದ್ದಾರೆ. ಈಗಾಗಲೇ ಸಿಎಂ ಜೊತೆ ಮಾತುಕತೆ ನಡೆಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಲಕ್ಷ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ನನ್ನ ಮುಂದೆಯೇ ಹಾಸನ ಜಿಲ್ಲೆಯ ಡಿಸಿಗೆ ಫೋನ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಕೃಷ್ಣಮೂರ್ತಿಯವರ ವರ್ಗಾವಣೆ ಆದೇಶ ರದ್ದು ಮಾಡಿದ್ದು, ನನ್ನ ಮನವಿಗೆ ಮತ್ತು ಮಾಜಿ ಪ್ರಧಾನಿ ಮನವಿಗೆ ಸ್ಪಂದಿಸಿ ಕಳೆದ ಎರಡು ದಿನದಲ್ಲಿ ಜಿಲ್ಲೆಗೆ 1000 ರೆಮ್ಡಿಸಿವಿಯರ್ ಕಳುಹಿಸಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.